ಎಲ್ಲದಕ್ಕೂ ಮನೋಬಲವೇ ಮದ್ದು


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 19  :-  ಸಮಾಜವನ್ನು ಜಾಗೃತಿಗೊಳಿಸುವ ಮತ್ತು ಮನೋಸ್ಥೈರ್ಯ  ತುಂಬುವ ಕಥೆಯಾಧಾರಿತ ಚಿತ್ರವನ್ನು ನಿರ್ಮಿಸುವುದು ಮೊದಲ ಆದ್ಯತೆಯಾಗಿದೆ. ಎಲ್ಲದಕ್ಕೂ ಮನೋಬಲವೇ ಮದ್ದು ಆಗಿದೆ ಎಂದು ಚಲನಚಿತ್ರ ನಿರ್ದೇಶಕ ವೆಂಕಟೇಶ್ ಕೊಟ್ಟೂರು ತಿಳಿಸಿದರು.
ಪಟ್ಟಣದ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ಆವರಣದಲ್ಲಿ ಬುಧವಾರ ನಡೆದ ಚಿಂತನ –ಚೇತನ ಸರಣಿ ಮಾಲಿಕೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಸಿಯಾಗುವಂಥ ಸಣ್ಣ, ಪುಟ್ಟ ಕಾಯಿಲೆ ಬಂದರೂ ಯುವಜನತೆ ಮಾನಸಿಕ ಖಿನ್ನತೆಯಿಂದ ಬಳಲುವ ಸಾಧ್ಯತೆಯಿದೆ. ಇಂಥ ಹೊತ್ತಲ್ಲಿ ಕ್ಯಾನ್ಸರ್ ಪೀಡಿತರಾಗಿದ್ದರೂ ಮನೋಬಲವಿದ್ದರೆ ಅದನ್ನೂ ಗೆಲ್ಲುವ ವಿಶ್ವಾಸವಿದೆ ಎಂಬುದನ್ನು ಚಿತ್ರದಲ್ಲಿ ಜನತೆಗೆ ಸಂದೇಶ ನೀಡಲಾಗಿದೆ. ಜತೆಗೆ ಭೈರವಿ ರಾಗದ ಸಂಗೀತವು ‘ರಾಗ ಭೈರವಿ’ ಚಿತ್ರಕ್ಕೆ ಪ್ರಧಾನವಾಗಿದೆ ಎಂದು ತಿಳಿಸಿದರು.
ಸಾಹಿತಿ ಭೀಮಣ್ಣ ಪತ್ರಕರ್ತ ಮಾತನಾಡಿ, ಮನರಂಜನೆಯ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಲಾತ್ಮಕ ಚಲನಚಿತ್ರಗಳ ತಯಾರಿಕೆಗೆ ಮುಂದಾಗಿರುವ ವೆಂಕಟೇಶ್ ಕೊಟ್ಟೂರು ಅವರ ಶ್ರಮಕ್ಕೆ ಪ್ರಶಸ್ತಿಯ ಪ್ರತಿಫಲ ಸಿಗಬೇಕಿದೆ. ಚಿಂತನ – ಚೇತನ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉತ್ತಮ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಈ ಸಂದರ್ಭದಲ್ಲ ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ , ಜೆಸಿಐ ಕೂಡ್ಲಿಗಿ ಗೋಲ್ಡನ್ ಅಧ್ಯಕ್ಷ  ಅಕ್ಕಿ ಕೊಟ್ರೇಶ್, ಮೈದಾನ ಗೆಳೆಯರ ಬಳದ ಕೊಟ್ರಪ್ಪಗಳ ನಾಗರಾಜ, ವಕೀಲ ಬಾಷಾ ಸೇರಿ ಇತರರು ಇದ್ದರು. ಇದೇ ಸಂದರ್ಭದಲ್ಲಿ ರಾಗ ಭೈರವಿ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.