ಎಲ್ಲದಕ್ಕೂ ಪುರಾವೆ ಬೇಕು

ಬೆಂಗಳೂರು, ಮಾ. ೨೮- ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಪ್ರಸ್ತಾಪವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಲ್ಲದಕ್ಕೂ ಸಾಕ್ಷಿ, ಪುರಾವೆ ಬೇಕು. ಯಾರೋ ಮಾತನಾಡಿದರೆ ಅದಕ್ಕೆ ತಲೆಕೆಡೆಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನ್ನ ಹೆಸರನ್ನು ಯಾರೇ ಪ್ರಸ್ತಾಪ ಮಾಡಲಿ ಅದಕ್ಕೆ ಸಾಕ್ಷ್ಯಗಳು ಬೇಕಲ್ಲವೆ ಸಾಕ್ಷಿ ಪುರಾವಣೆಗಳಲ್ಲಿದೆ ಮಾತನಾಡುವುದು ಸರಿಯಲ್ಲ ಎಂದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೋಷಕರಾಗಲಿ, ಯಾರೇ ಆಗಲಿ ಏನು ಬೇಕಾದರೂ ಹೇಳಲಿ ಆದರೆ ಎಲ್ಲದಕ್ಕೂ ಸಾಕ್ಷ್ಯ ಪುರಾವೆಗಳು ಬೇಕು ಎಂದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆದಿದೆ. ಎಲ್ಲದರ ಬಗ್ಗೆಯೂ ತನಿಖೆ ಆಗಿ ಸತ್ಯಾಸತ್ತೆ ಹೊರಬರಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದರು.
ನನ್ನ ಬಳಿ ಯಾರೂ ಬಂದಿಲ್ಲ. ನಾನು ಯಾರನ್ನೂ ಭೇಟಿಯೂ ಮಾಡಿಲ್ಲ ಎಂದು ಅವರು ಸಿಡಿ ಯುವತಿಯನ್ನು ಭೇಟಿಯಾಗಿದ್ದೇನೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ರಾಜಕೀಯ ಪಕ್ಷದ ನಾಯಕನಾಗಿ ಸಿಡಿ ಯುವತಿ ಮತ್ತು ಆಕೆಯ ಪೋಷಕರಿಗೆ ರಕ್ಷಣೆ ಕೊಡಿ ಎಂದು ಸರ್ಕಾರವನ್ನು ಕೇಳಿಕೊಂಡಿದ್ದೆ. ಅದು ಬಿಟ್ಟರೆ ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ಯಾವ ವಿಚಾರಕ್ಕೆ ರಾಜಕಾರಣ ಮಾಡಬೇಕೋ ಅದಕ್ಕೆ ಮಾತ್ರ ರಾಜಕಾರಣ ಮಾಡುತ್ತೇನೆ. ಸಿಡಿ ವಿಚಾರದಲ್ಲಿ ತಮ್ಮ ಹೆಸರನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದಾರೆ ಮಾಡಲಿ. ನಾನು ಅದಕ್ಕೆಲ್ಲಾ ತಲೆ ಕೆಡೆಸಿಕೊಳ್ಳಲ್ಲ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅವರ ಸಂಸ್ಕೃತಿ. ಅವರು ಮಹಾನಾಯಕ ಎಂದು ಕರೆಯುತ್ತಾರೋ, ಶೋ ಮ್ಯಾನ್ ಎಂದು ಕರೆಯುತ್ತಾರೋ ಅಥವಾ ಅವಾಚ್ಯವಾಗಿ ಕರೆಯುತ್ತಾರೋ ಏನು ಬೇಕಾದರೂ ಹೇಳಲಿ ಎಂದು ವ್ಯಂಗ್ಯವಾಡಿದರು.
ಎಸ್‌ಐಟಿ ತನಿಖೆ ನಡೆದಿದೆ. ತನಿಖೆ ನಂತರವೇ ಎಲ್ಲವೂ ಬಯಲಾಗಲಿದೆ ಎಂದು ಅವರು ಹೇಳಿದರು.
ಭದ್ರತೆ ಬೇಡ
ಇಂದು ಬೆಳಗಾವಿಗೆ ತೆರಳುತ್ತಿದ್ದೇನೆ. ನನಗೆ ಯಾವ ಭಯವೂ ಇಲ್ಲ. ಯಾರ ಭದ್ರತೆಯೂ ಬೇಡ. ಸಂಜೆ ಬೆಳಗಾವಿಯಲ್ಲಿ ನಮ್ಮ ನಾಯಕರ ಸಭೆ ಕರೆದಿದ್ದೇನೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ನಾನು ರಾಮಲಿಂಗಾರೆಡ್ಡಿ, ಎಸ್.ಆರ್ ಪಾಟೀಲ್ ಎಲ್ಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ ಎಂದರು.
ನನ್ನ ವಿರುದ್ಧ ಪ್ರತಿಭಟನೆಗಳು ನಡೆಯಲಿ ನನಗೇನು ಭದ್ರತೆ ಬೇಡ ಎಂದು ಪೊಲೀಸ್ ಆಯುಕ್ತರಿಗೆ ಪತ್ರವನ್ನೂ ಬರೆಯುತ್ತೇನೆ ಎಂದು ಡಿಕೆಶಿ ಹೇಳಿ, ಯಾರು ಯಾರನ್ನೋ ಕರೆದುಕೊಂಡು ಬಂದು ಹೇಳಿಕೆ ಕೊಡಿಸುತ್ತಿದ್ದಾರೆ, ಕೇಸು ಮುಚ್ಚಿ ಹಾಕಲು ಏನೆನೋ ಮಾಡುತ್ತಿದ್ದಾರೆ ಮಾಡಲಿ, ನಾನಂತೂ ಸಿಡಿ ಪ್ರಕರಣದಲ್ಲಿ ಯಾರ ವಿರುದ್ಧವೂ ದೂರು ನೀಡಲ್ಲ, ಕೇಸು ಹಾಕಲ್ಲ ಎಂದರು.
ಸಿಡಿ ಪ್ರಕರಣದ ಯುವತಿಯ ಪೋಷಕರು ವಿಜಾಪುರದಲ್ಲಿದ್ದರು ಈಗ ಬೆಳಗಾವಿಗೆ ಬಂದಿದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.