ಎಲ್ಲಡೆ ಲಿಂಗಾಯತ ಪಂಚಮಸಾಲಿ (ದೀಕ್ಷ) ಮಠಗಳ ಸ್ಥಾಪನೆ: ಕೂಡಲಸಂಗಮ ಶ್ರೀ

ಆಳಂದ:ಎ.6: ರಾಜ್ಯದಲ್ಲಿ ಲಿಂಗಾಯತ ಒಳಪಂಗಡಗಳಲ್ಲಿ ಬಹುಸಂಖ್ಯಾತರಿರುವ ಲಿಂಗಾಯತ ಪಂಚಮಸಾಲಿ (ದೀಕ್ಷ) ಸಮಾಜ ಬಾಂಧವರಿಗೆ ಧಾರ್ಮಿಕ ಮತ್ತು ನೈತಿಕ ಶಿಕ್ಷಣ ಸೇರಿ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕøತಿಕ ವಾಗಿ ಪ್ರಭಲವಾಗಿ ಬೆಳೆಸಲು ಮಠ, ಪೀಠಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಶ್ರೀ ಜಯಬಸವಮೃತ್ಯುಂಜಯ ಮಹಾಸ್ವಾಮಿಗಳು ಪ್ರಕಟಿಸಿದರು.

ರಾಜ್ಯದಲ್ಲಿ 2ಎ ಮೀಸಲಾತಿಗೆ ಒತ್ತಾಯಿಸಿ ಕೈಗೊಂಡಿದ್ದ ತಮ್ಮ ನೇತೃತ್ವದ ಹೋರಾಟದ ಬಳಿಕ ಆರಂಭಿಸಿದ ಶರಣು ಶರಣಾರ್ಥಿ ಸಂದೇಶ ಯಾತ್ರೆಗೆ ಪಟ್ಟಣದಲ್ಲಿ ಪಂಚಮಸಾಲಿ (ದೀಕ್ಷ), ಸಮಾಜ ಬಾಂಧವರು ಸೋಮವಾರ ಹಮ್ಮಿಕೊಂಡ ಅದ್ಧೂರಿ ಸ್ವಾಗತ ಸ್ವೀಕರಿಸಿ ಅವರು ಮಾತನಾಡಿದರು.

ಈಗಾಗಲೇ ಕೂಡಲಸಂಗಮದಲ್ಲಿ ಜಗದ್ಗುರು ಪೀಠವಿದೆ. ಇದರ ಅಡಿಯಲ್ಲಿ ದೇಶ ರಾಜ್ಯ, ಜಿಲ್ಲೆ ತಾಲೂಕು, ಊರು ಸೇರಿ ಅಗತ್ಯವಿರು ಎಲ್ಲಕಡೆಗಳಲ್ಲಿ ಪಂಚಮಸಾಲಿ (ದೀಕ್ಷ), ಮಠಗಳನ್ನು ಸ್ಥಾಪಿಸಿ ಸೂಕ್ತ ಮಠಾಧಿಪತಿಗಳನ್ನು ನೇಮಿಸಲಾಗುವುದು. ನಾಡಿನ ಹಲವು ಮಠ, ಪೀಠಗಳಲ್ಲಿ ಪಂಚಮಸಾಲಿ ದೀಕ್ಷ ಸಮಾಜದ ನೂರಾರು ಮಂದಿ ಸ್ವಾಮಿಗಳಾಗಿ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಅವರೆಯಲ್ಲರನ್ನೂ ಸಮಾಜದ ಒಟ್ಟು ಲಿಂಗಾಯತ ಸಮಾಜದ ಒಳತಿಗಾಗಿ ಒಂದು ವೇದಿಕೆಗೆ ತರಲಾಗುವುದು ಎಂದರು.

ಬರುವ ದಿನಗಳಲ್ಲಿ ಕೂಡಲಸಂಗಮ ಜಗದ್ಗುರು ಪೀಠದ ಮೂಲಕ ವಟುಗಳಿಗೆ ಮಠಾಧೀಶರ ತರಬೇತಿ ನೀಡಿ ಮಠಗಳಿಗೆ ನೇಮಿಸಲಾಗುವುದು. ನಮ್ಮ ಮೊದಲಾದ್ಯತೆಯಾಗಿ ಲಿಂಗಾಯತ ಪಂಚಮಸಾಲಿ(ದೀಕ್ಷ) ಸಮುದಾಯಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ಕಲ್ಪಿಸಲು ಆರು ತಿಂಗಳ ಕಾಲಾವಕಾಶ ಕೇಳಿದೆ, ಇದರಿಂದಾಗಿ ತಾತ್ಕಾಲಿಕವಾಗಿ ಧರಣಿ ಹಿಂದಕ್ಕೆ ಪಡೆದು ಹೋರಾಟ ಮುಂದುವರೆಸಲಾಗುತ್ತಿದೆ ಎಂದು ಅವರು ಹೇಳಿದರು.

ಸಿಎಂ ದಿಕ್ಕು ತಪ್ಪಿಸುತ್ತಿಲ್ಲ: ಪಂಚಮಸಾಲಿ ದೀಕ್ಷ ಸಮುದಾಯಕ್ಕೆ 2ಎ ಮೀಸಲಾಯಿತಿಯ ಹೋರಾಟಕ್ಕೆ ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಸಿಎಂ ಅವರು ಹರಿಹರದ ವಚನಾನಂದ ಶ್ರೀಗಳಿಗೆ ನಿನ್ನೆ ಭೇಟಿ ನೀಡಿದ್ದಾರೆ ಎಂಬುದಕ್ಕೆ ನಿರಾಕರಿಸಿದ ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹರಿಹರ್‍ದ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಶನಿವಾರ ಭೇಟಿ ನೀಡಿ ವಚನಾನಂದ ಶ್ರೀಗಳಿಗೆ ಭೇಟಿ ನೀಡಿರುವುದು ಇದೊಂದು ಸೌಹಾರ್ದ ಭೇಟಿಯಾಗಿದೆ, ಹೊರತು ಅವರ್ಯಾರು ನಮ್ಮ ಹೋರಾಟದ ದಿಕ್ಕುತಪ್ಪಿಸುತ್ತಿಲ್ಲ. ಮುಖ್ಯಮಂತ್ರಿಗಳು ಕಾಗಿನಲೇ ಗುರುಪೀಠದ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಹರಿಹರದ ಪೀಠದ ಶ್ರೀಗಳಿಗೆ ಭೇಟಿ ಮಾಡಿ ಆಶೀರ್ವಾದವನ್ನು ಪಡೆದಿದ್ದು ಇಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದು, ಇದರಿಂದ ಯಾವುದೇ ಉಹಾಪೂಹಗಳಿಗೆ ಕಿವಿಗೊಡಬಾರದು. ನಮ್ಮಲ್ಲಿ ಯಾವುದೇ ವಡಕ್ಕಿಲ್ಲ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಆರು ತಿಂಗಳು ಸಮಯಾವಕಾಶ ಪಡೆದಿರುವ ಸರ್ಕಾರ ನಂತರವೂ ನಮ್ಮ ಬೇಡಿಕೆ ಇಡೇರಿಸದೇ ಹೋದರೆ ಚಳುವಳಿ ಇನ್ನಷ್ಟು ಶಕ್ತಿಯುತವಾಗಿ ರೂಪುಗೊಳಿಸಿ 20 ಲಕ್ಷ ಜನ ಸೇರಿ ಸರ್ಕಾರಕ್ಕೆ ಒತ್ತಡ ಹೆರಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ, ಮಾಜಿ ಶಾಸಕ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು, ಜಿಪಂ ಮಾಜಿ ಸದಸ್ಯ ಮಲ್ಲಿನಾಥ ಪಾಟೀಲ ಮದಗುಣಕಿ, ಶಂಕರರಾವ್ ದೇಶಮುಖ ನಿರಗುಡಿ ಮತ್ತಿತರು ಉಪಸ್ಥಿತರಿದ್ದರು.