ಎಲ್‌ಬಿಎಸ್ ನೀರಿನ ಸಮಸ್ಯೆ ನಿವಾರಿಸಿದ ನಗರಸಭೆ – ಜನ ನಿರಾಳ

ಗುತ್ತೇದಾರಿಕೆ – ಶೇ.೪೦ ಕಮಿಷನ್ ಜನಪ್ರತಿನಿಧಿಗಳು ಸಮಸ್ಯೆಗಳ ಬಗ್ಗೆ ಗಮನ ಹರಿಸುವರೇ?
ರಾಯಚೂರು.ನ.೧೬- ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು, ಗುತ್ತೇದಾರಿಕೆ ಮತ್ತು ಶೇ.೪೦ ರಷ್ಟು ಕಮಿಷನ್‌ನಲ್ಲಿ ಮಗ್ನರಾಗಿದ್ದಾರೆ. ಜನರು ತಮ್ಮ ಸಮಸ್ಯೆಗಳನ್ನು ಮಾಧ್ಯಮಗಳ ಮೂಲಕ ಪರಿಹರಿಸಿಕೊಳ್ಳುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.
ಎಲ್‌ಬಿಎಸ್ ನಗರ ವಾರ್ಡ್ ೨೮, ೨೯ ನಿವಾಸಿಗಳಿಗೆ ಕಳೆದ ನಾಲ್ಕೈದು ದಿನಗಳಿಂದ ಒಳ ಚರಂಡಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದರೂ, ಇಲ್ಲಿಯ ಜನಪ್ರತಿನಿಧಿಗಳು ಗಮನ ಹರಿಸದಿರುವುದರಿಂದ ಜನ ಸಾಮಾಜಿಕ ಜಾಲತಾಣಗಳ ಮೂಲಕ ಮಾಧ್ಯಮಗಳ ಗಮನ ಸೆಳೆದು, ಕಲುಷಿತ ಕುಡಿವ ನೀರಿನ ಸಮಸ್ಯೆ ಪರಿಹರಿಸಿಕೊಳ್ಳಬೇಕಾಗಿದೆ. ಎಲ್‌ಬಿಎಸ್ ನಗರ ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಿ, ನಿನ್ನೆ ಸಂಜೆವಾಣಿಯಲ್ಲಿ ಪ್ರಕಟಗೊಂಡ ವರದಿ ಹಿನ್ನೆಲೆಯಲ್ಲಿ ಇಂದು ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಇಂದು ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಯ ಕಲುಷಿತ ಕುಡಿವ ನೀರಿನ ಸಮಸ್ಯೆ ಪರಿಹರಿಸಿದ್ದಾರೆ.
ಗ್ಯಾಸ್ ಲೈನ್ ಅಳವಡಿಸುವ ಕಾರ್ಮಿಕರಿಂದ ಯುಜಿಡಿ ಪೈಪ್ ದ್ವಂಸಗೊಂಡು ಪರಿಣಾಮ ಒಳ ಚರಂಡಿ ತ್ಯಾಜ್ಯ ಕುಡಿವ ನೀರಿನಲ್ಲಿ ಬೆರೆತು ಸಮಸ್ಯೆ ಉಂಟಾಗಿತ್ತು. ಇದನ್ನು ಗಮನಿಸಿದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಬಿರಾದರ ಅವರು ತಕ್ಷಣವೇ ದುರಸ್ತಿಗೊಳಿಸುವ ಮೂಲಕ ಸ್ಥಳೀಯ ಜನರ ಕುಡಿವ ನೀರಿನ ಸಮಸ್ಯೆ ನಿವಾರಿಸಿದ್ದಾರೆ. ಅಲ್ಲದೇ, ಗ್ಯಾಸ್ ಪೈಪ್ ಲೈನ್ ಅಳವಡಿಕೆಗೆ ನೋಟೀಸ್ ನೀಡುವುದಾಗಿ ಅವರು ತಿಳಿಸಿದರು.
ನಗರದ ೩೫ ವಾರ್ಡ್‌ಗಳ ಸಮಸ್ಯೆ ನಿವಾರಣೆಗೆ ಪ್ರತಿ ವಾರ್ಡ್‌ಗೂ ನಗರಸಭೆ ಸದಸ್ಯರನ್ನು ಆಯ್ಕೆಗೊಳಿಸಲಾಗುತ್ತದೆ. ಉಳಿದ ಜನಪ್ರತಿನಿಧಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಬಹುತೇಕ ಜನ ಕೇವಲ ಗುತ್ತೇದಾರಿಗೆ ಮತ್ತು ಶೇ.೪೦ ಭ್ರಷ್ಟಾಚಾರಕ್ಕೆ ನೀಡುವ ಆದ್ಯತೆ ಜನ ಸಾಮಾನ್ಯರ ಸಮಸ್ಯೆಗೆ ನೀಡದಿರುವುದರಿಂದ ಜನರು ನೀರಿನಿಂದ ಸಾಯುವಂತಹ ದುಸ್ಥಿತಿ ನಗರದಲ್ಲಿದೆ. ಕುಡಿವ ನೀರಿನ ಯೋಜನೆಗಳಿಗೆ ನೂರಾರು ಕೋಟಿ ವೆಚ್ಚ ಮಾಡಿದರೂ, ಜನರಿಗೆ ೨೪ ಘಂಟೆ ನೀರು ತಲುಪುತಿಲ್ಲ. ೩೦ ಲಕ್ಷ ಹಣ ವೆಚ್ಚ ಮಾಡಿದರೂ, ರಾಜಕಾಲುವೆ ಸ್ವಚ್ಛಗೊಳ್ಳಲಿಲ್ಲ. ೮೪ ಲಕ್ಷ ವೆಚ್ಚವಾದರೂ ಬಡವಾಣೆಯ ಚರಂಡಿ ಸ್ವಚ್ಛಗೊಳ್ಳಲಿಲ್ಲ. ಹೀಗೆ ಅಭಿವೃದ್ಧಿಯ ಹೆಸರಲ್ಲಿ ನೂರಾರು ಕೋಟಿ ಲೂಟಿ ಮಾಡುವ ಕೆಲ ಜನಪ್ರತಿನಿಧಿ ನಾಗರಿಕರ ಸಮಸ್ಯೆ ಕಾಣದಷ್ಟು ಕುರುಡಾಗಿದ್ದಾರೆ. ಇನ್ನಾದರೂ ಜನರ ಬಗ್ಗೆ ಕಾಳಜಿ ವಹಿಸಿ, ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯ ನೀಡುವತ್ತ ಜನಪ್ರತಿನಿಧಿಗಳು ಗಮನ ಹರಿಸುವರೇ?.