ಎಲ್&ಟಿ ಕಂಪೆನಿಗೆ ಜಲಮಂಡಳಿ ಹೊರಗುತ್ತಿಗೆ ನೌಕರರ ಹಸ್ತಾಂತರಕ್ಕೆ ವಿರೋಧ

ಕಲಬುರಗಿ,ಜೂ.9: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಎಲ್&ಟಿ ಕಂಪೆನಿಗೆ ಹಸ್ತಾಂತರಿಸದೇ ಮಂಡಳಿಯಲ್ಲಿ ಉಳಿಸಿಕೊಂಡು ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಇತರೆ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಹೊರಗುತ್ತಿಗೆ ನೌಕರರ ಸಂಘದ ವಲಯ ಅಧ್ಯಕ್ಷ ಸುನೀಲ್ ಮಾನ್ಪಡೆ ಅವರು ಒತ್ತಾಯಿಸಿದರು.
ಬುಧವಾರ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಮಹಾನಗರ ಪಾಲಿಕೆಯ ಅಧೀನದಲ್ಲಿರುವ ನೀರು ಪೂರೈಕೆ ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿಯ ಮಂಡಳಿಯು ನಿರ್ವಹಿಸುತ್ತಿದ್ದು, ಪ್ರಸ್ತುತ ವರ್ಷದಿಂದ ನೀರು ಪೂರೈಕೆ ನಿರ್ವಹಣೆಯ ಜವಾಬ್ದಾರಿಯನ್ನು ಎಲ್&ಟಿ ಕಂಪೆನಿಗೆ ವಹಿಸಿಕೊಡುವ ಕುರಿತು ಸರ್ಕಾರದ ಆದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರು ಸರಬರಾಜು ನಿರ್ವಹಣೆಯ ಸಂಬಂಧ ಎಲ್ಲ ಅಂಶಗಳು ಒಳಗೊಂಡಂತೆ (ಭೌತಿಕ ಮತ್ತು ಆರ್ಥಿಕ ಪರಿಹಾರ ಕಂಡುಕೊಳ್ಳಲು ಈಗಾಗಲೇ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ನೀರು ಸರಬರಾಜು ನಿರ್ವಹಣೆಯನ್ನು ಹಸ್ತಾಂತರಿಸುವ ಸಂಬಂಧ ಸರ್ಕಾರವು ಜಾರಿಗೊಳಿಸಿದ ಆದೇಶ ಗೌರವಿಸಲು ನಾವು ಸಿದ್ಧರಾಗಿದ್ದೇವೆ. ಆದಾಗ್ಯೂ, ಬೇರೆ, ಬೇರೆ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರನ್ನು ಅವರ ಸೇವಾ ಹಿರಿತನದಲ್ಲಿ ಖಾಯಂ ಮಾಡಿಕೊಳ್ಳಲಾಗುತ್ತಿದೆ. ಆದಾಗ್ಯೂ, ಮಹಾನಗರ ಪಾಲಿಕೆಯಾಗಲಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸರಬರಾಜು ಮಾಡುತ್ತಿದೆ. ಅದರಿಂದ 15-20 ವರ್ಷಗಳಿಂದ ದುಡಿದು ಮಂಡಳಿಗೆ ಇಲ್ಲಿಯವರೆಗೆ ಯಾವುದೇ ಅಪವಾದ ಬರದಂತೆ ದುಡಿದರೂ ಸಹ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ ಎಂದು ಅವರು ದೂರಿದರು.
ಸೇವಾ ಹಿರಿತನವನ್ನು ನೋಡಿದರೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕಾಗಿತ್ತು. ಆದಾಗ್ಯೂ, ದಿಡೀರನೇ ಈಗ ಮತ್ತೆ ಎಲ್&ಟಿ ಕಂಪೆನಿಗೆ ಸರಬರಾಜು (ಮಾರಾಟ) ಮಾಡುತ್ತಿರುವುದು ಸಾವಿರಾರು ನೌಕರರ ಕುಟುಂಬಕ್ಕೆ ಆಘಾತವುಂಟು ಮಾಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ನೀರು ಸರಬರಾಜು ನಿರ್ವಹಣೆಯನ್ನು ಎಲ್&ಟಿ ಕಂಪೆನಿಗೆ ವಹಿಸಿಕೊಡುವ ಮುನ್ನ ಹೊರಗುತ್ತಿಗೆ ನೌಕರರ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಕುರಿತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಹಾಗೂ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಬೇಕು ಎಂದು ಅವರು ಕೋರಿದರು.
ಹೊರಗುತ್ತಿಗೆ ನೌಕರರನ್ನು ಸರ್ಕಾರ ಎಲ್&ಟಿ ಕಂಪೆನಿಗೆ ಹಸ್ತಾಂತರ ಮಾಡುವುದನ್ನು ನಿಲ್ಲಿಸಿ ಮಂಡಳಿಯಲ್ಲಿಯೇ ಉಳಿಸಿಕೊಂಡು ವೇತನ ಪಾವತಿಸುವಂತೆ, ಹೊರಗುತ್ತಿಗೆ ನೌಕರರನ್ನು ಮಾರಾಟದ ಸರಕಾಗಿ ನೋಡುತ್ತಿರುವ ಸರ್ಕಾರದ ಧೋರಣೆಯನ್ನು ನೌಕರರ ಹಿತದೃಷ್ಟಿಯಿಂದ ಹಿಂಪಡೆಯುವಂತೆ, ಒಂದು ವೇಳೆ ಹೊರಗುತ್ತಿಗೆ ಸಿಬ್ಬಂದಿಯನ್ನು ಎಲ್&ಟಿ ಕಂಪೆನಿಗೆ ಹಸ್ತಾಂತರಿಸಿದಲ್ಲಿ ನೌಕರರ ಮೇಲೆ ಇಲ್ಲ, ಸಲ್ಲದ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆಯಲು ಮುಂದಾದಲ್ಲಿ ಅಂತಹ ನೌಕರರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಅವರು ಒತ್ತಾಯಿಸಿದರು.
ಎಲ್&ಟಿ ಕಂಪೆನಿಯವರು ಸುಮಾರು ವರ್ಷಗಳಿಂದ ದುಡಿದ ಅಂಗವಿಕಲ ಹಾಗೂ ಮಹಿಳಾ ಹೊರಗುತ್ತಿಗೆ ನೌಕರರನ್ನು ಅನಾವಶ್ಯಕ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆಯುವ ಸಂದರ್ಭ ಬಂದಲ್ಲಿ ಅವರ ಕುಟುಂಬ ಸದಸ್ಯರೊಬ್ಬರಿಗೆ ನೌಕರಿ ನೀಡುವಂತೆ, ಹೊರಗುತ್ತಿಗೆ ಸಿಬ್ಬಂದಿ ಸೇವೆಯಲ್ಲಿ ಇರುವಾಗಲೇ ನಿಧನ ಹೊಂದಿದರೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ನೀಡುವಂತೆ, ನೌಕರರಿಗೆ ಪ್ರತಿ ತಿಂಗಳು 5ರೊಳಗೆ ವೇತನ ನೀಡುವಂತೆ, ಸರ್ಕಾರದ ಆದೇಶದಂತೆ ವೇತನ ಸಹಿತ ರಜೆ ನೀಡುವಂತೆ ಮತ್ತು ಕೆಲಸ ಮಾಡುವ ಸಮಯದಲ್ಲಿ ಆರ್ಥಿಕ ನೆರವು ನೀಡುವಂತೆ ಅವರು ಆಗ್ರಹಿಸಿದರು.
ಹೊರಗುತ್ತಿಗೆ ನೌಕರರ ಆರೋಗ್ಯ ಏರುಪೇರಾದರೆ (ಲಕ್ವಾ, ಹೃದಯಾಘಾತ, ದೀರ್ಘ ಅನಾರೋಗ್ಯ ಇತ್ಯಾದಿ) ಅವರ ಕುಟುಂಬದ ಸದಸ್ಯರೊಬ್ಬರಿಗೆ ಬದಲಿ ವ್ಯವಸ್ಥೆ ಕಲ್ಪಿಸುವಂತೆ, ಹೊರಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ ಅವರು ಪಡೆಯುವ ವೇತನದ ಕುರಿತು ಮಾಹಿತಿ ಅರಿಯಲು ಪ್ರತಿ ತಿಂಗಳು ವೇತನ ಚೀಟಿಯ ಒಂದು ಪ್ರತಿಯನ್ನು ನೀಡುವಂತೆ, ಕಲಬುರ್ಗಿ ವಲಯದಲ್ಲಿ ಹೊರಗುತ್ತಿಗೆ ನೌಕರರು ಗರಿಷ್ಠವಾಗಿ ಎಷ್ಟು ಜನ ನೌಕರರು ಯಾವ, ಯಾವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದರ ಕುರಿತು ಖಚಿತಪಡಿಸಿಕೊಳ್ಳಲು ತನಿಖೆ ಮಾಡಿ ನಕಲಿ ಹೊರಗುತ್ತಿಗೆ ನೌಕರರ ಹೆಸರಿನಲ್ಲಿ ಹಣ ಪೋಲಾಗುವುದನ್ನು ತಡೆಯುವಂತೆ ಅವರು ಒತ್ತಾಯಿಸಿದರು.
ಹಲವು ವರ್ಷಗಳಿಂದ ಟೆಂಡರ್‍ನಲ್ಲಿ ಕಡಿಮೆ ನೌಕರರನ್ನು (225) ತೋರಿಸಿ ನಂತರ 75 ಜನ ನೌಕರರು ಇನ್ನೂ ಹೆಚ್ಚುವರಿ ಇದ್ದಾರೆ ಎಂದು ಹೇಳಿ ವೇತನದಲ್ಲಿ 2000ರಿಂದ 2500ರೂ.ಗಳ ವೇತನ ಕಡಿತಗೊಳಿಸಿ ನೌಕರರಿಗೆ ವೇತನ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದು, ಅದರಿಂದ ದುಡಿಯುವ ನಮಗೆ ಬರುವ ವೇತನದಲ್ಲಿ ಭಾರಿ ನಷ್ಟ ಆಗುತ್ತಿದೆ. ಆದ್ದರಿಂದ ಕೂಡಲೇ ತನಿಖೆ ಕೈಗೊಳ್ಳುವಂತೆ, ಹೊರಗುತ್ತಿಗೆ ನೌಕರರು ಪ್ರತಿ ದಿನವೂ ಕೆಲಸ ಮಾಡಿದರೂ ತಿಂಗಳಲ್ಲಿ ಕನಿಷ್ಠ ಮೂರ್ನಾಲ್ಕು ರಜೆ ಹಾಕಿ ಅನ್ಯಾಯ ಮಾಡುತ್ತಿದ್ದು, ಕೂಡಲೇ ಹಾಜರಿ ಪುಸ್ತಕದಲ್ಲಿ ನೌಕರರಿಂದಲೇ ಸಹಿ ಮಾಡಿಕೊಂಡು ಅದರ ಒಂದು ಪ್ರತಿ ನೌಕರರಿಗೆ ತಿಂಗಳ ಕೊನೆಯಲ್ಲಿ ನೀಡುವಂತೆ ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಬಿಕ್ಕಿ, ಖಜಾಂಚಿ ನಾರಾಯಣ್ ರಂಗದಾಳ್, ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಗೋಗಿ, ರಾಜು ಬನ್ನಿ, ಅನಿಲ್ ಮಂಗಾ, ಚಂದ್ರು ಹತಗುಂದಿ, ಶಿವರಾಜ್ ಸಿಂಧೆ, ತವರು ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.