ಎಲೆ ಚಿಕ್ಕಿ ರೋಗ ಪರಿಹಾರಕ್ಕಾಗಿ ಬಾಲರಾಮನಿಗೆ ಮೊರೆ

ಚಿಕ್ಕ್ಕಮಗಳೂರು ,ಫೆ.೧೯-ಅಯೋಧ್ಯೆಯಲ್ಲಿ ಪ್ರತಿಷ್ಟಾಪನೆಗೊಂಡು ದೇಶಾದ್ಯಂತ ಭಕ್ತರಿಗೆ ದರ್ಶನ ನೀಡುತ್ತಿರುವ ಬಾಲರಾಮನ ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಇದೀಗ ಮಲೆನಾಡಿನ ರೈತರನ್ನು ಕಾಡುವ ಕೊಳೆ ರೋಗ, ಎಲೆ ಚುಕ್ಕೆ ರೋಗದಿಂದ ಕಂಗಾಲಾಗಿರುವ ರೈತರು ತಮ್ಮ ಕಷ್ಟ ಪರಿಹರಿಸಲು ಬಾಲರಾಮನ ಮೊರೆ ಹೋಗಿದ್ದಾರೆ.
ಮಲೆನಾಡು ಭಾಗದ ರೈತರು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸು ದೇವರೇ ಎಂದು ಜಿಲ್ಲೆಯ ಮಲೆನಾಡು ಭಾಗದ ರೈತರು ಅಯೋಧ್ಯೆಯ ರಾಮನಲ್ಲಿ ಬೇಡಿಕೊಂಡಿದ್ದಾರೆ.
ರೈತರು ಹಿಂಗಾರವನ್ನು ತೆಗೆದುಕೊಂಡು ಅಯೋಧ್ಯೆಗೆ ತೆರಳಿದ್ದು, ಇಂದು ಅಥವಾ ನಾಳೆ ರಾಮನಿಗೆ ಅಡಿಕೆ ಹಿಂಗಾರವನ್ನು ಅರ್ಪಿಸಲಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ೫೦ಕ್ಕೂ ರಾಮ ಭಕ್ತರು ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ಹೋಗಿದ್ದಾರೆ. ಅಯೋಧ್ಯೆಗೆ ತೆರಳುವ ಮೊದಲು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾರ್ಕಂಡೇಶ್ವರ ದೇವಾಲಯಕ್ಕೆ ಮಲೆನಾಡಿನ ಅಡಿಕೆಯ ಹಿಂಗಾರವನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅದೇ ಹಿಂಗಾರವನ್ನು ಅಯೋಧ್ಯೆಯ ರಾಮನಿಗೆ ಪೂಜೆ ಸಲ್ಲಿಸಲು ತೆಗೆದುಕೊಂಡು ಹೋಗಿದ್ದಾರೆ.
ಮಲೆನಾಡಿನಲ್ಲಿ ಅಡಕೆ ಹಿಂಗಾರಕ್ಕೆ ಬಹಳ ಪ್ರಾಮುಖ್ಯತೆಯಿದೆ. ದೀಪಾವಳಿ ಹಬ್ಬದಲ್ಲಿ ಪ್ರತಿಮನೆಗಳಲ್ಲಿ ಅಡಕೆ ಹಿಂಗಾರವನ್ನಿಟ್ಟು ಪೂಜಿಸುವುದು ವಾಡಿಕೆ ಅಡಕೆ ಹಿಂಗಾರವಿಲ್ಲದೇ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.