ಎಲೆಬೇತೂರು: ಶಾಲಾ ಪ್ರಾರಂಭೋತ್ಸವಕ್ಕೆ ಡಯಟ್ ಪ್ರಾಂಶುಪಾಲರ ಪ್ರಶಂಸೆ*

ದಾವಣಗೆರೆ.ಜೂ.6; ತಾಲ್ಲೂಕಿನ ಎಲೆಬೇತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಪರಿಶೀಲನೆಗೆ ಆಗಮಿಸಿದ್ದ ಡಯಟ್ ಪ್ರಾಂಶುಪಾಲರಾದ ಗೀತಾ ಮಾತನಾಡಿ, ಮುಖ್ಯಶಿಕ್ಷಕರು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಹಾಜರಿದ್ದು, ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡುತ್ತಿರುವುದನ್ನು ಕಾಣಬಹುದು. ಶಾಲಾ ಆವರಣ, ಅಡುಗೆ ಕೋಣೆ, ಶೌಚಾಲಯ ಸ್ವಚ್ಛತೆಗೆ, ಕುಡಿಯುವ ನೀರಿಗೆ ಆದ್ಯತೆಯನ್ನು ಕೊಟ್ಟಿದ್ದಾರೆ. ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಿ ಸಿದ್ಧತೆ ಮಾಡಿಕೊಂಡಿದ್ದು ಶಾಲೆಗೆ ಮಕ್ಕಳನ್ನು ಬರಮಾಡಿಕೊಂಡರು. ಮಕ್ಕಳಿಗೆ ಪಠ್ಯ-ಪುಸ್ತಕಗಳನ್ನು ನೀಡಿದ್ದಾರೆ. ಶಿಕ್ಷಕರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕ್ರಿಯಾಯೋಜನೆಗಳನ್ನು ಮತ್ತು ವೇಳಾಪಟ್ಟಿ ಸಹ ಸಿದ್ಧ ಮಾಡಿಕೊಂಡಿರುವುದು, ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಕೊಂಡಿರುವುದು ನಮ್ಮ ಗಮನಕ್ಕೆ ಬಂದಿದ್ದು ಉತ್ತಮ ಬೆಳವಣಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ಬಸವನಗೌಡಪ್ಪ, ಸದಸ್ಯರಾದ ಬಿ. ಶಿವಕುಮಾರ್, ಹಂಚಿನಮನೆ ಚೇತನ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಂಪುರ ನಾಗರಾಜ್, ಶಾಲಾ ಶಿಕ್ಷಣಪ್ರೇಮಿ, ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ, ಜಿ.ಪಂ. ಮಾಜಿ ಸದಸ್ಯ ಬಿ. ಕರಿಬಸಪ್ಪ, ಕಾಡಾ ಸಮಿತಿ ಮಾಜಿ ಸದಸ್ಯ ಎಚ್. ಬಸವರಾಜಪ್ಪ, ದಾಮ್‌ಕೋಸ್ ನಿರ್ದೇಶಕ ಮಠದ ಬಸವರಾಜಯ್ಯ, ಮುಖ್ಯೋಪಾಧ್ಯಾಯಿನಿ ಬಿ. ಸುಜಾತ, ಶಿಕ್ಷಕವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.