ಎಲೆಕ್ಷನ್ ಹಿನ್ನೆಲೆಯಲ್ಲಿ ಅಳುತ್ತ ಮೊಸಳೆ ಕಣ್ಣೀರು

ವಿಜಯಪುರ:ಮಾ.14: ಅಳುವ ಗಂಡಸರನ್ನು ನಂಬಬಾರದು ಎಂದು ಹಿರಿಯರು ಹೇಳಿದ್ದಾರೆ. ಆದರೆ, ಕೆಲವರು ಮದ್ಯ ಮಾರಾಟದಿಂದ ಜನರ ಜೀವನ ಹಾಳು ಮಾಡಿ ಈಗ ಎಲೆಕ್ಷನ್ ಹಿನ್ನೆಲೆಯಲ್ಲಿ ಅಳುತ್ತ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ. ಪಾಟೀಲ(ರಾಹುಲ್ ಪಾಟೀಲ) ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅವರು ಕಳೆದ ಅನೇಕ ವರ್ಷಗಳಿಂದ ಮದ್ಯ ಮಾರಾಟ ಮಾಡುತ್ತ ಸಾಕಷ್ಟು ಜನರ ಮನೆ ಹಾಳು ಮಾಡಿ, ಮಕ್ಕಳು, ತಾಯಂದಿರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಮದ್ಯ ಮಾರಾಟ ಮತ್ತು ಇವರ ಗೂಂಡಾಗಿರಿಯಿಂದಾಗಿ ಹಲವಾರು ಕುಟುಂಬಗಳು ಅಳುವಂತೆ ಮಾಡಿದ್ದಾರೆ. ಜನರ ಜೀವನದೊಂದಿಗೆ ಚೆಲ್ಲಾಟವಾಡಿ ಈಗ ಕೇವಲ ಎಲೆಕ್ಷನ್ ಹಿನ್ನೆಲೆಯಲ್ಲಿ ತಾಯಂದಿರನ್ನು ಒಲಿಸಿಕೊಳ್ಳಲು ಮೊಸಳೆ ಕಣ್ಣೀರು ಹಾಕುವುದನ್ನು ಬಿಡಿ ಎಂದು ಅವರು ವಾಗ್ದಾಳಿ ನಡೆಸಿದರು.

ಯಾವುದೇ ಬದ್ಧತೆ ಎಂಬುದು ಇಲ್ಲದ, ಹೊಳೆ(ನದಿ)ಯ ಈ ಕಡೆಗೊಂದು, ಆ ಕಡೆಗೊಂದು ಪಕ್ಷ ಎನ್ನುವ ಇವರಿಗೆ ಪಕ್ಷದ ಬದ್ಧತೆ, ಸಾಮಾಜಿಕ ಬದ್ಧತೆ, ಸಾಮಾಜಿಕ ನ್ಯಾಯದ ಬದ್ಧತೆ ಯಾವುದೂ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸಂಕಷ್ಟ ಸಮಯ್ದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯ ಕುಲಪತಿ ಡಾ. ಎಂ. ಎಸ್. ಬಿರಾದಾರ ಅವರು ವೈದ್ಯರಾಗಿ ರೋಗಿಗಳ ಸೇವೆ ಮಾಡುವಾಗ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಆದರೆ, ವಿರೋಧಿಗಳು ಅವರ ಸಾವಿನ ಬಗ್ಗೆಯೂ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ ಅವರು, ಕೊರೊನಾ ಸಂದರ್ಭದಲ್ಲಿ ನಮ್ಮ ಬಿ.ಎಲ್.ಡಿ.ಇ ಆಸ್ಪತ್ರೆ ಮಾಡಿದ ಜನಸೇವೆಯನ್ನು ರಾಜ್ಯ ಆರೋಗ್ಯ ಸಚಿವ ಸುಧಾಕರ ಅವರೇ ಮೆಚ್ಚಿದ್ದಾರೆ. ಬಿ.ಎಲ್.ಡಿ.ಇ ಕರ್ನಾಟಕದ ಸಂಜೀವಿನಿಯಾಗಿತ್ತು ಎಂದು ಪ್ರಶಂಸಿಸಿದ್ದಾರೆ. ಆದರೆ, ವಿರೋಧಿಗಳು ಕೊರೊನಾ ಸಂದರ್ಭದಲ್ಲಿ ಮನೆಮನೆಗೆ ಮದ್ಯವನ್ನು ನಾಲ್ಕೈದು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಾರೆ. ಅಳುವುದು, ಆ ದೇವರ ಮೇಲೆ ಆಣೆ, ಈ ದೇವರ ಮೇಲೆ ಆಣೆ ಮಾಡುವುದು ಅವರ ಚಾಳಿಯಾಗಿದೆ ಎಂದು ಬಸನಗೌಡ ಎಂ. ಪಾಟೀಲ ಹೇಳಿದರು.

ನಮ್ಮ ತಂದೆಯವರಾದ ಎಂ. ಬಿ. ಪಾಟೀಲರು 10 ವರ್ಷಗಳಿಂದ ಪರಿವಾರವನ್ನು ಲೆಕ್ಕಿಸದೇ ಈ ಭಾಗಕ್ಕೆ ನೀರಾವರಿ ಮಾಡಲು ಹಗಲಿರುಳು ಶ್ರಮಿಸಿದ್ದಾರೆ. ನಮ್ಮ ಕುಟುಂಬದ ಜೊತೆ ಊಟ ಮಾಡದೇ, ಸದಾಕಾಲ ಕೆಲಸ ಮಾಡುತ್ತ ಕಾರಿನಲ್ಲಿಯೇ ಕುಳಿತುಕೊಂಡು ಊಟ ಮಾಡಿದ್ದು ಈ ಭಾಗದ ಜನರಿಗೆ ಗೊತ್ತೆ ಇದೆ. ಈಗಲೂ ಬೆಂಗಳೂರಿಗೆ ಹೋಗಿ ಹಣ ತಂದು ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನಾವು ಕೈಲಾದಷ್ಟು ಉತ್ತಮ ಕೆಲಸ ಮಾಡಿದ್ದೇವೆ ಹೊರತು ಮೊಸಳೆ ಕಣ್ಣೀರು ಸುರಿಸುವ ಕೆಲಸ ಮಾಡಿಲ್ಲ. ಐದು ಬಾರಿ ಶಾಸಕ, ಒಂದು ಬಾರಿ ಸಂಸದ, ಒಂದು ಬಾರಿ ಜಲಸಂಪನ್ಮೂಲ ಸಚಿವ, ಒಂದು ಬಾರಿ ಗೃಹ ಸಚಿವರಾಗಿದ್ದರೂ ನಮ್ಮ ತಂದೆಯವರು ಮನೆಯ ಮುಂದೆ ಎಂ. ಬಿ. ಪಾಟೀಲ ಎಂದು ಮಾತ್ರ ಬೋರ್ಡ್ ಹಾಕಿದ್ದಾರೆ. ಆದರೆ, ಅವರು ವಿಜ್ಞಾನಿ ಅಥವಾ ಕಾರ್ಯಕರ್ತರೊಬ್ಬರಿಗೆ ಸಿಗಬೇಕಿದ್ದ ನಿಗಮಕ್ಕೆ ಅಧ್ಕ್ಷರಾಗಿ ಮನೆಯ ಮುಂದೆ ದೊಡ್ಡ ಬೋರ್ಡ್ ಹಾಕಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ನಮ್ಮ ಅಜ್ಜನವರ ಕಾಲದಿಂದಲೂ ಸಾಮಾಜಿಕ ನ್ಯಾಯದ ತತ್ವದಡಿ ಎಲ್ಲರ ಕೆಲಸ ಮಾಡುತ್ತ ಬಂದಿದ್ದೇವೆ. ವಿಜಯಪುರ ನಗರದಲ್ಲಿ ಅಲ್ಪಸಂಖ್ಯಾತರಾದ ಭಕ್ಷಿ, ಉಸ್ತಾದ, ಬಾಗವಾನ ಅವರನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಪೆÇ??. ರಾಜು ಆಲಗೂರ ಸೇರಿದಂತೆ ಅನೇಕ ನಾಯಕರಲ್ಲಿರುವ ನಾಯಕತ್ವದ ಗುಣವನ್ನು ಗುರುತಿಸಿ ಅವರನ್ನು ಬೆಳೆಸುವ ಪ್ರಯತ್ನ ಮಾಡಿದ್ದೇವೆ. ಅಂಥವರಲ್ಲಿ ಈಗ ಕೆಲವರು ಬೇರೆ ಪಕ್ಷಗಳಲ್ಲಿದ್ದಾರೆ. ಎಲ್ಲ ಸಮುದಾಯಗಳು, ಉಪಪಂಗಡಗಳಿಗೆ ಸಹಕಾರ ನೀಡುತ್ತಿದ್ದೇವೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಅವರು ಹೇಳಿದರು.

ಮದಗುಣಕಿ ಗ್ರಾಮಸ್ಥರು ನಮ್ಮ ಹಾಗೂ ನಮ್ಮ ಕುಟುಂಬದ ಮೇಲೆ ಪ್ರೀತಿ ಮತ್ತು ವಿಶ್ವಾಸ ಇಟ್ಟಿದ್ದು, ಇಲ್ಲಿನ ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ತಂದೆಯವರು ಈಡೇರಿಸಿದ್ದಾರೆ. ಪ್ರತಿಪಕ್ಷದಲ್ಲಿರುವವರು ಸರಕಾರದಿಂದ ಅನುದಾನ ಸರಕಾರದಿಂದ ಅನುದಾನ ತರಬೇಕೆಂದರೆ ಹುಲಿ ಬಾಯಿಯಿಂದ ತಂದಂತೆ ಎಂಬ ಮಾತಿನ ನಡುವೆ ಈ ಬಾರಿಯೂ ರಾಜ್ಯ ಸರಕಾರದಿಂದ ಅನುದಾನ ತಂದಿದ್ದಾರೆ. ಮುಂದೆ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು, ಇನ್ನುಳಿದ ಬೇಡಿಕೆಗಳನ್ನೂ ಈಡೇರಿಸಲಿದ್ದಾರೆ. ಈಗ ಮಮದಾಪುರ ಮತ್ತು ಇತರ ಹಲವಾರು ಕೆರೆಗಳು ಭರ್ತಿಯಾಗಿವೆ. ಬಬಲೇಶ್ವರ ಮತಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ಸಮುದಾಯ ಭವನ ನಿರ್ಮಿಸಿದ್ದಾರೆ. ಎಲ್ಲ ಸಮುದಾಯಕ್ಕೆ, ವಿಜಯಪುರ ಜಿಲ್ಲಾ ಕೇಂದ್ರದಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ನಮ್ಮ ಸಾಧನೆಗಳನ್ನು ತಮ್ಮ ಚುನಾವಣೆ ಗಿಮಿಕ್ ಗಾಗಿ ಮಾಡುವುದಿಲ್ಲ. ಐದು ವರ್ಷಗಳಲ್ಲಿ ರಾಜ್ಯದ ಇತಿಹಾಸದಲ್ಲಿ ಕರ್ನಾಟಕದ ಯಾವುದೇ ಮತಕ್ಷೇತ್ರದಲ್ಲಿ ಇಷ್ಟು ಸಮುದಾಯ ಭವನ, ನೀರಾವರಿ ಯಾಗಿದ್ದರೆ ತೋರಿಸಲಿ ಎಂದು ಬಸನಗೌಡ ಎಂ. ಪಾಟೀಲ ವಿರೋಧಿಗಳಿಗೆ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ. ಕೆ. ಶಿವಣ್ಣವರ, ಮಲ್ಲಪ್ಪ ನಿಂ. ಶೇಗುಣಶಿ(ಗಡದಿನ್ನಿ), ಎಚ್. ಕೆ. ಮುಂಬಾರೆಡ್ಡಿ, ಸಂಗಪ್ಪ ಶಿವಪ್ಪ ಚಲವಾದಿ, ಚನ್ನಯ್ಯ ಸ್ವಾಮೀಗಳು, ಎ. ಬಿ. ಪಾಟೀಲ, ಎಸ್. ಆರ್. ಮೇಲ್ಗಡೆ, ಪರಮಾನಂದ ಯ. ಚಲವಾದಿ, ಸದಾಶಿವ ಸ. ಬಿರಾದಾರ, ಎಂ. ಎಂ. ಸೊನ್ನದ, ಅಡಿವೆಪ್ಪ ಸಾಲಗಲ, ಮದಗುಣಕಿ ಗ್ರಾಮದ ಸದಾಶವಿ ಹಣಮಂತ ಚಲವಾದಿ, ಹಣಮಂತ ಅಪ್ಪಸಿ ಚಲವಾದಿ, ಎಲ್ಲಪ್ಪ ಮರೆಪ್ಪ ಚಲವಾದಿ, ಶ್ರೀಶೈಲ ಗದಿಗೆಪ್ಪ ಚಲವಾದಿ, ಭೀಮಪ್ಪ ಶಂಕ್ರೆಪ್ಪ ಚಲವಾದಿ, ಸುಭಾಷ ಪುಂಡಲಿಕ ಚಲವಾದಿ ಮತ್ತು ಗ್ರಾಮದ ಹಿರಿಯರು ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.