ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಳ

ಬೆಂಗಳೂರು, ನ.೧೧- ರಾಜ್ಯದ ಎಲ್ಲೆಡೆ ವಿದ್ಯುತ್ ಚಾಲಿತ ವಾಹನ ಬಳಕೆ ದ್ವಿಗುಣವಾಗುತ್ತಿರುವ ನಡುವೆ ಇವಿ ಮಾಲೀಕರಿಗೆ ಬಹುವಾಗಿ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ ಕಾಡುತ್ತಿದೆ.
ಬೆಂಗಳೂರಿನಲ್ಲಿ ಈ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಶ್ರಮಿಸುತ್ತಿದೆ. ಆದರೆ, ರಾಜ್ಯಾದ್ಯಂತ ನಗರಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ ಇದೆ. ಸದ್ಯಕ್ಕೆ ಸಿಲಿಕಾನ್ ಸಿಟಿಯಲ್ಲಿಬೆಸ್ಕಾಂ ಸುಮಾರು ೩೩೪ ಚಾರ್ಜಿಂಗ್ ಸ್ಟೇಷನ್‌ಗಳನ್ನು ೧೪೮ ವಿವಿಧ ಕಡೆಗಳಲ್ಲಿ ಅಳವಡಿಸಿದೆ.
ಜಿಲ್ಲಾ ಕೇಂದ್ರಗಳಲ್ಲಿ, ಪ್ರವಾಸೋದ್ಯಮ ಸ್ಥಳ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಇವಿ ಚಾರ್ಜಿಂಗ್ ಜಾಲ ಸೃಷ್ಟಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮತ್ತೊಂದೆಡೆ, ಕರ್ನಾಟಕ ರಾಜ್ಯ ದೇಶದಲ್ಲೇ ವಿದ್ಯುತ್ ಚಾಲಿತ ವಾಹನಗಳ ಮಾರಾಟದಲ್ಲಿ ೫ನೇ ಸ್ಥಾನದಲ್ಲಿದೆ. ಅಕ್ಟೋಬರ್‌ವರೆಗೆ ರಾಜ್ಯದಲ್ಲಿ ಒಟ್ಟು ೧,೧೯,೬೨೫ ಇವಿ ನೋಂದಣಿಯಾಗಿವೆ.
ಈವರೆಗೆ ಒಟ್ಟು ೧,೦೩,೩೯೩ ಇವಿ ದ್ವಿಚಕ್ರವಾಹನ, ೯,೭೪೨ ಇವಿ ತ್ರಿಚಕ್ರ ವಾಹನ ಹಾಗು ೬,೪೯೦ ನಾಲ್ಕು ಚಕ್ರದ ಇವಿ ವಾಹನಗಳನ್ನು ನೋಂದಣಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಅಂಕಿ-ಅಂಶ ನೀಡಿದೆ.
ಹಾಗೇ, ೨೦೧೭-೧೮ರಲ್ಲಿ ರಾಜ್ಯದಲ್ಲಿ ನೋಂದಣಿಯಾಗಿದ್ದ ಇವಿ ಕೇವಲ ೧,೯೨೨. ೨೦೧೮-೧೯ರಲ್ಲಿ ೫,೫೪೨, ೨೦೧೯-೨೦ರಲ್ಲಿ ೬,೭೭೪, ೨೦೨೦-೨೧ ರಲ್ಲಿ ೧೧,೫೯೩, ೨೦೨೧-೨೨ರಲ್ಲಿ ೪೪,೨೧೭ ಇವಿ ನೋಂದಣಿಯಾಗಿದ್ದವು. ಅದೇ ೨೦೨೨-೨೩ರಲ್ಲಿ ಅಕ್ಟೋಬರ್ ವೇಳೆಗೆ ೪೯,೫೭೭ ಇವಿಗಳು ನೋಂದಣಿಯಾಗಿತ್ತು.