ಎಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ: ಮುಖಂಡನಿಂದ ಆರ್ಥಿಕ ನೆರವು”


ಸಿರಿಗೇರಿ ಜ2. ಸ್ಥಳೀಯ ಮುದ್ದಟನೂರು ರಸ್ತೆಯ ಎಸ್‍ಬಿಐ ಬ್ಯಾಂಕ್ ಮುಂದಿನ ಜಂಬನಗೌಡ್ರ ಬಾವಿ ಹತ್ತಿರದ ಪ್ರದೇಶದಲ್ಲಿ ಟಿವಿ ರಿಪೇರಿ ಮತ್ತು ಎಲೆಕ್ಟ್ರಾನ್ ವಸ್ತುಗಳ ಮಾರಾಟ ಅಂಗಡಿಯೊಂದಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಸಂಭವಿಸಿದ ಅಕಸ್ಮಾತ್ ಬೆಂಕೆ ಅವಘಡಕ್ಕೆ ಸಂಪೂರ್ಣ ಅಂಗಡಿ ಭಸ್ಮವಾಗಿದೆ. ಡಿ.31 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಅವಘಡ ಸಂಭವಿಸಿದ್ದು ಗ್ರಾಮದ ರಾಜಶೇಖರ ಆಚಾರಿ |ತಂದೆ| ಶಿವಕುಮಾರ ಎಂಬುವವರಿಗೆ ಸೇರಿದ ಶೆಡ್ ಅಂಗಡಿಯಾಗಿದೆ. ಅಂಗಡಿಯಲ್ಲಿ ಗ್ರಾಹಕರು ರಿಪೇರಿಗಾಗಿ ತಂದಿದ್ದ ಹತ್ತಾರು ಟಿವಿಗಳು, ಮಾರಲು ಇಟ್ಟಿದ್ದ ಟಿವಿಗಳು, ಇತರೆ ಕುಕ್ಕರ್, ಮಿಕ್ಸಿಯಂತಹ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಭಸ್ಮವಾಗಿದ್ದು ಸುಮಾರು 5ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಸಂತ್ರಸ್ತರು ಮಾಹಿತಿ ನೀಡಿದ್ದಾರೆ.
    ಘಟನೆ ನಡೆದ ದಿನ ಅವಘಡ ಸಂಭವಿಸಿದ ಸಮಯಕ್ಕೆ ಕುರುಗೋಡಿನಿಂದ ಬೆಂಕಿ ನಿಯಂತ್ರಣದ ಅಗ್ನಿಶಾಮಕ ದಳದವರು ಬಂದು ಆರಿಸುವ ಹೊತ್ತಿಗೆ ಅಂಗಡಿಯ ಶೆಡ್ ಬಹುತೇಕ ಸುಟ್ಟುಹೋಗಿದ್ದು, ಸ್ಥಳೀಯ ಪೋಲಿಸ್ ಠಾಣೆಗೆ ಪ್ರಕರಣದ ಮಾಹಿತಿ ನೀಡಲಾಗಿದ್ದು, ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅವಘಡ ಸಂಭವಿಸಿದ ಮಾಹಿತಿ ಪಡೆದ ಸಿರುಗುಪ್ಪ ತಾಲೂಕು ಆಮ್ ಆದ್ಮಿ ಪಾರ್ಟಿ ಮುಖಂಡ ಧರಪ್ಪನಾಯಕ ಜ.1 ರಂದು ಸಿರಿಗೇರಿಗೆ ಭೇಟಿನೀಡಿ ಸಂತ್ರಸ್ಥ ರಾಜಶೇಖರ ಆಚಾರಿಗೆ ಆರ್ಥಿಕ ನೆರವುನೀಡಿ ಸಂತೈಸಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಪರಿಹಾರಕ್ಕಾಗಿ ಪ್ರಯತ್ನಿಸಲಾಗುವುದು. ಈರೀತಿಯ ಘಟನೆಗಳು ಸಂಭವಿಸಿದಾಗ ಸಹಾಯಕವಾಗುವಂತೆ ಯಾವುದೇ ಸಣ್ಣಪುಟ್ಟ ಅಂಗಡಿಯವರು ತಮ್ಮ ಅಂಗಡಿಗಳ, ವ್ಯವಹಾರಗಳ ಮೇಲೆ ಇನ್ಸುರೆನ್ಸ್ ಹೊಂದಿರುವುದು ಸೂಕ್ತವಾದುದು, ಇಂತಹ ಸಂದರ್ಭದಲ್ಲಿ ಸಹಾಯವಾಗುತ್ತದೆ ಎಂದು ಕಿವಿಮಾತು ಹೇಳಿದರು.