ಎಲಿಫೆಂಟ್ ವಿಸ್ಪರರ್ಸ್‌ಗೆ ಆಸ್ಕರ್

ಲಾಸ್ ಏಂಜಲೀಸ್, ಮಾ. ೧೩- ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಅತ್ಯುತ್ತಮ ಸಾಕ್ಷ್ಯಚಿತ್ರ ಕಿರು ವಿಷಯ ಪ್ರಶಸ್ತಿ ಗೆಲ್ಲುವ ಮೂಲಕ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಚಿತ್ರಗಳಿಗೆ ಹೆಮ್ಮೆಯ ಕ್ಷಣಕ್ಕೆ ಕಾರಣವಾಗಿದೆ.
ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡು ಆಸ್ಕರ್ ಪ್ರಶಸ್ತಿ ಪಡೆದಿದ್ದು ಈ ಬಾರಿಯ ಆಸ್ಕರ್ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಆಸ್ಕರ್ ಪ್ರಶಸ್ತಿ ಇದಾಗಿದೆ.
ಕಥೆ ಏನಿದು
‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದಲ್ಲಿ ಮಾನವ ಹಾಗೂ ಪ್ರಾಣಿಗಳ ಮಧ್ಯೆ ಬಂಧ ಬೆಳೆದರೆ ಅದು ಹಾಗೆಯೇ ಉಳಿಯುತ್ತದೆ ಎಂದು ತೋರಿಸಿ ಕೊಡಲಾಗಿದೆ.
ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ, ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮುಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಕಥಾ ಹಂದರವನ್ನು ಒಳಗೊಂಡಿದೆ.
ಇದೊಂದು ಭಾವನಾತ್ಮಕ ಕಿರುಚಿತ್ರವಾಗಿದ್ದು, ನೆಟ್‌ಫಿಕ್ಸ್ ನಲ್ಲಿ ಪ್ರಸಾರ ಕಂಡಿದೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ನಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಸಾರಲಾಗಿದೆ.
ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಚಿತ್ರ ಭಾರತಕ್ಕೆ ಹೆಸರು ತಂದುಕೊಟ್ಟಿದೆ. ಈ ವರ್ಷದ ಮೊದಲ ಆಸ್ಕರ್ ಪ್ರಶಸ್ತಿ ಇದಾಗಿದೆ.
ಕಾರ್ತಿಕಿ (ಗೊನ್ಸಾಲ್ವೆಸ್) ಚಿತ್ರದ ಮೂಲಕ ಸಾಧಿಸಲು ಬಯಸಿದ್ದೆಲ್ಲವೂ ಆಕೆಗೆ ಸಿಕ್ಕಿದೆ. ಇದು ನಿಜವಾಗಿಯೂ ದೀರ್ಘ ಪ್ರಯಾಣವಾಗಿತ್ತು ಎಂದು ಗುಣೀತ್ ಮೊಂಗಾ ಅವರು ಹೇಳಿದ್ದಾರೆ.
‘ದಿ ಎಲಿಫೆಂಟ್ ವಿಸ್ಪರರ್ಸ್’ ಆಸ್ಕರ್ ಅವಾರ್ಡ್ ಪಡೆದಿದ್ದರಿಂದ, ಇಡೀ ಜಗತ್ತು ಈ ಯೋಜನೆಯನ್ನು ನೋಡುತ್ತಿದೆ ಮತ್ತು ಮಾತನಾಡುತ್ತಿದೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಆಸ್ಕರ್ ಅವಾರ್ಡ್ ಪಡೆದಿದ್ದಕ್ಕೆ ಇಡೀ ಚಿತ್ರತಂಡ ತುಂಬಾ ಖುಷಿಯಾಗಿದೆ. ಭಾರತಕ್ಕೆ ಹೆಸರು ತಂದುಕೊಟ್ಟ ಸಿನಿಮಾಗೆ ಸಲಾಂ ಎಂದಿದ್ದಾರೆ.