ಎಲಚಿಹಣ್ಣಿನ ಉಪಯೋಗಗಳು

ಎಲಚಿಹಣ್ಣು ಅಥವಾ ಬೋರೆಹಣ್ಣು ಅಂತಲೂ ಇದನ್ನು ಕರೆಯುತ್ತಾರೆ. ಎಲಚಿಹಣ್ಣು ೨ – ೩ ಬಗೆಯ ಆಕಾರದಲ್ಲಿ ನಮಗೆ ಕಾಣಸಿಗುತ್ತದೆ. ದಪ್ಪನಾಗಿ ಉದ್ದುದ್ದ ಇರುವ ಹಣ್ಣು ಒಂದು ಬಗೆ. ಇದು ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ಸಿಗುತ್ತದೆ. ಇದು ವೀರ್ಯವರ್ಧಕ, ಪಿತ್ತ, ದಾಹ, ರಕ್ತ ವಿಕಾರಗಳನ್ನು ನಿವಾರಿಸುತ್ತದೆ.
೧. ನೆಗಡಿ, ಕೆಮ್ಮು ಮತ್ತು ಜ್ವರಕ್ಕೆ: ಎಲಚಿಹಣ್ಣನ್ನು ಚಚ್ಚಿ ಅದನ್ನು ಕುಕ್ಕರ್‌ನಲ್ಲಿ ಬೇಯಿಸಿ, ನೀರು ಹಾಕಬಾರದು. ಪಾತ್ರೆಯಲ್ಲಿ ಮುಚ್ಚಿಡಬೇಕು. ನಂತರ ತೆಗೆದು ರಸವನ್ನು ಶೋಧಿಸಿಕೊಂಡು ಸಕ್ಕರೆಯ ಪಾಕಮಾಡಿ, ಬೆರೆಸಬೇಕು. ಚಳಿಗಾಲದಲ್ಲಿ ಬರುವ ನೆಗಡಿ, ಕೆಮ್ಮು ಮತ್ತು ಜ್ವರಕ್ಕೆ ಒಳ್ಳೆಯ ಔಷಧಿಯಾಗಿದೆ.
೨. ಮೊಡವೆ ಸಮಸ್ಯೆಗೆ: ಇದರ ಬೀಜವನ್ನು ತೆಗೆದು ನೀರಿನಲ್ಲಿ ಅರೆದು ಮೊಡವೆಗೆ ಹಚ್ಚಿದರೆ ಮೊಡವೆಗಳು ಮಾಯವಾಗುತ್ತವೆ ಹಾಗೂ ದಪ್ಪ ಎಲಚಿಹಣ್ಣನ್ನು ಒಣಗಿಸಿ ಸುಟ್ಟು ಬೂದಿಮಾಡಿ ನೀರಿನಲ್ಲಿ ಕಲಸಿ ಹಚ್ಚಿದರೆ ಮೊಡವೆಗೆ ದಿವ್ಯ ಔಷಧಿ.
೩. ಬೆವರಿಗೆ: ಎಲಚಿ ಗಿಡದ ಎಲೆಗಳನ್ನು ಚೆನ್ನಾಗಿ ಅರೆದು ಕೈ – ಕಾಲುಗಳಿಗೆ ಹಚ್ಚಿದರೆ, ಹೆಚ್ಚಾಗಿ ಬರುವ ಬೆವರು ಕಡಿಮೆ ಆಗುತ್ತದೆ.
೪. ಸುಟ್ಟಗಾಯಕ್ಕೆ: ಎಲಚಿಗಿಡದ ಎಳೆಯ ಕುಡಿಯನ್ನು ಅಥವಾ ಎಳೆಯ ಕಾಯಿಯನ್ನು ಮೊಸರಿನ ಜೊತೆಯಲ್ಲಿ ಅರೆದು ಹಚ್ಚಿದರೆ ಉರಿಯು ಕಡಿಮೆ ಆಗುತ್ತದೆ ಮತ್ತು ಸುಟ್ಟಗಾಯ ಮಾಯುತ್ತದೆ.
೫. ಬಿಕ್ಕಳಿಕೆಗೆ: ಎಲಚಿಹಣ್ಣಿನ ಬೀಜದೊಳಗಿನ ಹೋಳನ್ನು ಹಿಪ್ಪಲಿಯೊಡನೆ ಪುಡಿಮಾಡಿ ಜೇನುತುಪ್ಪದೊಡನೆ ಸೇವಿಸಿದರೆ, ಕ್ರಮೇಣ ಬಿಕ್ಕಳಿಕೆ ಕಡಿಮೆಯಾಗುತ್ತದೆ.
೬. ಕೂದಲು ಬೆಳೆಯುವುದಕ್ಕೆ: ಇದರ ಎಲೆ ಹಾಗೂ ಬೆಟ್ಟದ ನೆಲ್ಲಿಕಾಯಿಯೊಡನೆ ಅರೆದು ತಲೆಗೆ ಹಚ್ಚಿ ಸ್ನಾನಮಾಡಿದರೂ ಕೂಡ ಕೂದಲು ಸೊಂಪಾಗಿ ಬೆಳೆಯುತ್ತದೆ. ಎಲೆಯ ಜೊತೆಗೆ ಎಳ್ಳಿನ ಗಿಡದ ಎಲೆಯನ್ನು ಉಪಯೋಗಿಸಬಹುದು.
೭. ಬಿಳಿಕೂದಲು ಕಪ್ಪಾಗುವುದಕ್ಕೆ: ಈ ಗಿಡದ ಹಸಿಯ ಚಕ್ಕೆ, ಅಳಲೆಕಾಯಿ, ತಾರೆಕಾಯಿ, ನೆಲ್ಲಿಕಾಯಿ, ಗುರುಗ ಸೊಪ್ಪು ಎಲ್ಲವನ್ನೂ ಸಮವಾಗಿ ತಂದು ಅರೆದು ಕಬ್ಬಿನ ರಸದಲ್ಲಿ ಸೇರಿಸಿ ಕಬ್ಬಿಣದ ಪಾತ್ರೆಯಲ್ಲಿ ಹಾಕಿ ಮುಚ್ಚಿಟ್ಟು ಒಂದು ತಿಂಗಳು ತೆಗೆಯಬಾರದು. ಗಾಳಿ ಆಡಬಾರದು ನಂತರ, ತೆಗೆದು ತಲೆಗೆ ಹಚ್ಚಿ ಸ್ನಾನ ಮಾಡುತ್ತಾ ಇದ್ದರೆ ಬಿಳಿಕೂದಲು ಕಪ್ಪಾಗುತ್ತದೆ.
೮. ನರಮಂಡಲದ ರಕ್ಷಣೆಗೆ: ಈ ಹಣ್ಣಿನ ವೈಶಿಷ್ಟ್ಯವೆಂದರೆ, ನರಮಂಡಲದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುತ್ತದೆ. ಇದನ್ನು ಬೇಕಾದರೆ ಪರಿಶೀಲಿಸಿ ನೋಡಬಹುದು. ಯಾರಾದರೂ ಚೇಷ್ಟೆ ಮಾಡುವವರಿದ್ದರೆ, ಅಂತಹ ಮಕ್ಕಳಿಗೆ ಒಣಗಿದ ಎಲಚಿಯ ಹಣ್ಣಿನ ಕಷಾಯ ಕೊಡಿ ತುಂಟತನ ಮಾಯವಾಗಿ ಸಿಡುಕುತನ ಎಲ್ಲವೂ ಕಡಿಮೆ ಆಗುತ್ತದೆ. ಸಂಕ್ರಾಂತಿಯಲ್ಲಿ ಮಕ್ಕಳನ್ನು ಕೂಡಿಸಿ, ಎಲಚಿಹಣ್ಣು ಹಾಗೂ ಕಬ್ಬಿನ ತುಂಡನ್ನು ತಲೆಯ ಮೇಲೆ ಎರೆಯತ್ತಾರೆ. ಇದೂ ಕೂಡ ಮಕ್ಕಳಲ್ಲಿ ಇರುವ ಕೋಪ, ಸಿಟ್ಟು ಕಡಿಮೆ ಮಾಡಲಿಕ್ಕೆ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ಅಂಗವಾಗಿ ಈ ಪದ್ಧತಿಯನ್ನು ಅನುಸರಿಸುತ್ತಾರೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧