ಎರಡೂ ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ನೀಡಲಾಗಿದೆ; ಗೃಹ ಸಚಿವ ಡಾ.ಜಿ.ಪರಮೇಶ್ವರ

ಸಂಜೆವಾಣಿ ವಾರ್ತೆ

ದಾವಣಗೆರೆ, ಮೇ.31;ಚನ್ನಗಿರಿ ಘಟನೆ ಕುರಿತಂತೆ ಮಾಹಿತಿ ಪಡೆಯಲು ಖುದ್ದಾಗಿ ನಾನು ಇಲ್ಲಿಗೆ ಬಂದಿದ್ದು, ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಿದ್ದು ಒಂದು ಪ್ರಕರಣವಾದರೆ, ಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣ ಸಹ ಒಂದಾಗಿದೆ. ಎರಡೂ ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ಚನ್ನಗಿರಿ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆ ಮತ್ತು ಎಫ್ಎಸ್ಎಲ್ ವರದಿ ಬಂದಾಗಲಷ್ಟೇ ಸತ್ಯಾಂಶ ಗೊತ್ತಾಗಲಿದೆ. ಈವರೆಗೆ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ, ಇಲಾಖೆ ಸ್ವತ್ತು ಧ್ವಂಸ ಸೇರಿದ ಪ್ರಕರಣಗಳಲ್ಲಿ ಒಟ್ಟು 30 ಜನರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದರು. ಇಂತಹ ಪ್ರಕರಣ ನಡೆದಾಗ ಅಮಾನತು ಸಹಜವಾಗಿ ಆಗುತ್ತದೆ. ಘಟನೆ ಬಗ್ಗೆ ತನಿಖೆಯಾಗಿ, ಅಂತಹ ಅಧಿಕಾರಿಗಳ ತಪ್ಪಿಲ್ಲವೆಂದರೆ ಮತ್ತೆ ಸೇವೆಯಲ್ಲಿ ಮುಂದುವರಿಯುತ್ತಾರೆ. ಕಲ್ಲು ತೂರಾಟ ಯಾವ ಕಾರಣಕ್ಕೆ ನಡೆದಿದೆಯೆಂಬುದನ್ನು ಕಲ್ಲು ತೂರಿದವರನ್ನೇ ನೀವು ಕೇಳಬೇಕು. ಕಲ್ಲು ತೂರಾಟ ಮಾಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಸೆರೆಯಾದವರನ್ನು ಹಿಡಿದು, ಶಿಕ್ಷೆ ಕೊಡಿಸುತ್ತೇವೆ ಎಂದು ಅವರು ಹೇಳಿದರು. ಮೊನ್ನೆ ಚನ್ನಗಿರಿ ಗಲಾಟೆ ವೇಳೆ ಪಾಕಿಸ್ಥಾನ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿ, ಕಲ್ಲು ತೂರಾಟ ನಡೆಸಿರುವುದು ಪ್ರಕರಣದಲ್ಲಿ ಕಂಡು ಬಂದಿಲ್ಲ. ಹಾಗೇನಾದರೂ ಪಾಕಿಸ್ಥಾನದ ಪರ ಘೋಷಣೆ ಕೂಗಿದ್ದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಪಾಕಿಸ್ಥಾನದ ಪರ ಘೋಷಣೆ ಕೂಗದೇ ಇದ್ದರೂ, ಕೂಗಿದ್ದಾರೆಂದು ಪ್ರಚಾರ ಮಾಡುವವರ ವಿರುದ್ಧವೂಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.