ಎರಡು ವೈದ್ಯಕೀಯ ಕಾಲೇಜು ಆರಂಭ;ಸುಧಾಕರ್

ಚಿಕ್ಕಬಳ್ಳಾಪುರ, ನ.೨೫- ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎರಡು ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರು ತಿಳಿಸಿದರು.
ಅವರು ಗೌರಿಬಿದನೂರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜಿಲ್ಲೆಯ ಸಮಸ್ತ ಜನರ ಹೆಮ್ಮೆಯಾದ “ಸರ್ಕಾರಿ ವೈದ್ಯಕೀಯ ಕಾಲೇಜು” ನಿರ್ಮಾಣ ಹಂತದಲ್ಲಿರುವ ನೂತನ ಕಟ್ಟಡದಲ್ಲಿ ಮುಂದಿನ ಮೂರು ತಿಂಗಳಲ್ಲಿ ಆರಂಭವಾಗಲಿದೆ ಜೊತೆಗೆ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಸರಳ ಮೆಡಿಕಲ್ ಕಾಲೇಜು ಸಹ ೨೦೨೩ ರ ಮಾರ್ಚ್ ಅಂತ್ಯದಲ್ಲಿ ಆರಂಭವಾಗಿ ಜನರ ಸೇವೆಗೆ ಮುಕ್ತ ಆಗಲಿವೆ ಎಂದು ತಿಳಿಸಿದರು.
ಅರೋಗ್ಯವಂತ ಸಮಾಜವನ್ನು ಮಾತ್ರ ಸಂಪತ್ ಭರಿತ ಸಮಾಜ ಅಂತಾ ಕರೆಯಬಹುದು.ಅದಕ್ಕಾಗಿ ನಮ್ಮ ಸರ್ಕಾರ ಮುಂದಿನ ಡಿಸೇಂಬರ್ ಒಳಗೆ ನೂತನವಾಗಿ ೪೩೮ “ನಮ್ಮ ಕ್ಲಿನಿಕ್ ಗಳನ್ನು ತೆರೆಯುತ್ತಿದೆ.ಈಗಾಗಲೇ ರಾಜ್ಯದಲ್ಲಿ ೧೦೮೦ ಜನೌಷಧಿ ಕೇಂದ್ರಗಳನ್ನು ತೆರೆಯುವ ಮೂಲಕ ಅತೀ ಹೆಚ್ಚು ಕೇಂದ್ರಗಳನ್ನು ತೆರೆದು ದೇಶದಲ್ಲಿಯೇ ಎರಡನೇ ಸ್ಥಾನಗಳಿಸಿದೆ, ಶೇ ೮೦ ರಷ್ಟು ರಿಯಾಯ್ತಿಯಲ್ಲಿ ಜನರಿಗೆ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೇವಲ ೬ ತಿಂಗಳು ಅಂತರದಲ್ಲಿ ೧೫೦೦ ವೈದ್ಯರನ್ನು ನೇಮಕ ಮಾಡಲಾಗಿದೆ ಜೊತೆಗೆ ಹೊರಗುತ್ತಿಗೆ ಆಧಾರದಲ್ಲಿ ೨,೮೦೦ ವೈದ್ಯರು, ೧,೨೦೦ ತಜ್ಞ ವೈದ್ಯರು ಸೇರಿದಂತೆ ಒಟ್ಟು ೪ ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದೆ.ಸರ್ಕಾರದ ಪ್ರತಿ ಆಸ್ಪತ್ರೆಗಳಲ್ಲಿ ಶೇ. ೫೦ ರಷ್ಟು ಹಾಸಿಗೆಗಳನ್ನು ಆಮ್ಲಜನಕ ಸಹಿತ ಹಾಸಿಗೆಗಳನ್ನಾಗಿಸಿ ಅರೋಗ್ಯ ಸೇವೆ ನೀಡಲಾಗುತ್ತಿದೆ.ಆಸ್ಪತ್ರೆಗಳಲ್ಲಿ ಉನ್ನತ ಸೌಕರ್ಯಗಳನ್ನು ಒದಗಿಸಲಾಗಿದೆ. ಸುಸಜ್ಜಿತ ವೈದ್ಯಕೀಯ ಯಂತ್ರೋಪಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲಾಗಿದೆ ಎಂದರು.
೧.೨೦ ಕೋಟಿ ಅಯುಷ್ಮಾನ್ ಕಾರ್ಡ್ ಸಿದ್ದ
ಸುಸಜ್ಜಿತ ಉನ್ನತ ಆಸ್ಪತ್ರೆಗಳಲ್ಲಿ ೫ ಲಕ್ಷ ರೂ ಮೊತ್ತದ ಉಚಿತ ಅರೋಗ್ಯ ಸೇವಾ ಸೌಲಭ್ಯವನ್ನು ಒದಗಿಸುವ ೧.೨೦ ಕೋಟಿ ಕಾರ್ಡ್ ಗಳನ್ನು ವಿತರಣೆಗೆ ಸಿದ್ದಪಡಿಸಲಾಗಿದೆ, ಶೀಘ್ರದಲ್ಲೇ ಮಾನ್ಯ ಮುಖ್ಯಮಂತ್ರಿಗಳ ದಿನಾಂಕ ಪಡೆದು ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಉಚಿತವಾಗಿ ವಿತರಣೆ ಮಾಡುವ ಕಾರ್ಯ ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ನಾಗರಾಜ್ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವ ದಲ್ಲಿ ಅಮೃತ ಯೋಜನೆಯಡಿ ೮ ಸಾವಿರ ಕೋಟಿ ಅನುದಾನವನ್ನು ನೀಡಲಾಗುತ್ತಿದೆ. ಪ್ರತಿ ಮನೆಗೂ ನಲ್ಲಿ ಸಂಪರ್ಕದ ಮೂಲಕ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ನೀಡಲು ಯೋಜಿಸಲಾಗಿದೆ.ದೇಶದ ಸಮಸ್ತ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಈ ಕಾರ್ಯಕ್ಕೆ ಮಾನ್ಯ ಪ್ರಧಾನಮಂತ್ರಿಗಳಿಗೆ ಮತ್ತು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಗೌರಿಬಿದನೂರು ನಗರಸಭೆ ವ್ಯಾಪ್ತಿಯಲ್ಲಿ ೨೦೨೨-೨೦೨೩ನೇ ಸಾಲಿನ ೧೫ನೇ ಹಣಕಾಸು ಆಯೋಗದ ಅನುದಾನದಡಿ ಸುಮಾರು ೨ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಗೌರಿಬಿದನೂರು ನಗರದಲ್ಲಿ ಶಂಕುಸ್ಥಾಪನೆ ಕಾರ್ಯಗಳನ್ನು ನೆರವೇರಿಸಲಾಗಿದೆ ಎಂದರು.
ಗೌರಿಬಿದನೂರು ಶಾಸಕ ಎನ್. ಎಚ್ ಶಿವಶಂಕರ್ ರೆಡ್ಡಿ ಅವರು ಮಾತನಾಡಿ ಗೌರಿಬಿದನೂರು ನಗರದಲ್ಲಿ ಒಂದು ರಕ್ತ ನಿಧಿ ಕೇಂದ್ರ ತೆರೆಯಲು, ನಾಮಗೊಂಡ್ಲು ಗ್ರಾಮದಲ್ಲಿ ಮಾದರಿ ಅರೋಗ್ಯ ಕೇಂದ್ರ ತೆರೆಯಲು, ಅಯುಷ್ಮಾನ್ ಯೋಜನೆಯ ಕುರಿತು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಪಕ ಪ್ರಚಾರ ಮತ್ತು ಜಾಗೃತಿ ಮೂಡಿಸಲು ಹಾಗೂ ಗೌರಿಬಿದನೂರು ವಿಧಾನ ಸಭಾ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವರುಗಳಲ್ಲಿ ಮನವಿ ಮಾಡಿದರು.

ಇಂದು ಚಾಲನೆ ಗೊಂಡ ಕಾಮಗಾರಿಗಳು
ಗೌರಿಬಿದನೂರು ನಗರದಲ್ಲಿ ೨೭ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ.
ಕಾದಲವೇಣಿ ಗ್ರಾಮದಲ್ಲಿ ಹಾಗೂ ಹಿರೇಬಿದನೂರಿನಲ್ಲಿ ೧.೧೦ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಗಳ ಕಟ್ಟಡಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ.
ಗೌರಿಬಿದನೂರು ನಗರಸಭೆ ವ್ಯಾಪ್ತಿಯಲ್ಲಿ ೨೦೨೨-೨೦೨೩ನೇ ಸಾಲಿನ ೧೫ನೇ ಹಣಕಾಸು ಆಯೋಗದ ಅನುದಾನದಡಿ ಸುಮಾರು ೨ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ನ ಅಧ್ಯಕ್ಷ ಎಂ. ರವಿನಾರಾಯಣ ರೆಡ್ಡಿ, ಗೌರಿಬಿದನೂರು ನಗರಸಭೆ ಅಧ್ಯಕ್ಷಿಣಿ ರೂಪ ಅನಂತರಾಜು,ಗೌರಿಬಿದನೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೇಣುಗೋಪಾಲ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡಿದ್ದರು.