ಎರಡು ವರ್ಷದ ನಂತರ ಶಿಶುವಿಹಾರ ಆರಂಭ

ಶಹಾಪುರ: ನ.9:ಒಂದೆಡೆ ಅಣ್ಣಅಕ್ಕಂದಿರು ಶಾಲೆಗೆ ಹೋಗುವಾಗ ಅವರ ಹಿಂದೆ ಶಾಲೆಗೆ ಹೋದರು ಶಿಕ್ಷಕರು ನಿಯಮಾನುಸಾರ ಮರಳಿ ಮನೆಗೆ ಕಳುಹಿಸುತ್ತಿದ್ದರು, ಹೀಗೆ ಸುದೀರ್ಘವಾಗಿ ಕೋವಿಡ್ ಹಾವಳಿಯಿಂದ ಎರಡು ವರ್ಷಗಳ ಕಾಲ 3ರಿಂದ 5 ವರ್ಷದ ಮಕ್ಕಳಿಗೆ ಆರಂಭಿಕ ಶಿಕ್ಷಣ ಸಿಗದಂತಹ ಸಂದರ್ಭದಲ್ಲಿ ಸರ್ಕಾರ ಅಂಗನವಾಡಿ ಮತ್ತು ಶಿಶುವಿಹಾರ ನಡೆಸಲು ಹಸಿರು ನಿಶಾನೆ ತೋರಿಸಿದ್ದು, ಚಿಕ್ಕಮಕ್ಕಳಿಂದ ಇಂದು ಚಿಣ್ಣರ ಅಂಗಳದಲ್ಲಿ ಖುಷಿಯ ವಾತಾವರಣವಿದೆ ಎಂದು ಶಿಕ್ಷಕ ಗಿರೀಶ ರಾಜಪುರೋಹಿತ ತಿಳಿಸಿದರು.

  ನಗರದ ಹಳಪೇಟೆಯಲ್ಲಿನ ಜ್ಞಾನಗಂಗೋತ್ರಿ ಶಾಲೆಯಲ್ಲಿ ಶಿಶುವಿಹಾರ ಕೇಂದ್ರ ಆರಂಭಿಸಿದ ಸಂದರ್ಭದಲ್ಲಿ ಅಭಿಪ್ರಾಯ ಹಂಚಿಕೊಂಡ ಅವರು, ಆರೋಗ್ಯದ ಕಾಳಜಿಯ ಬಗ್ಗೆ ಚಿಕ್ಕಮಕ್ಕಳಿಗೆ ಮನದಟ್ಟಾಗುವಂತೆ ತಿಳಿಸಿದರು.

     ನಗರಸಭೆ ಸದಸ್ಯರಾದ ಕಾಶಿನಾಥ ಕಲ್ಮನಿ ಜ್ಯೋತಿ ಬೆಳಗಿಸಿ ಶಿಶುವಿಹಾರ ಆರಂಭಕ್ಕೆ ಚಾಲನೆ ನೀಡಿದರು, ಮಕ್ಕಳಿಗೆ ಸಿಹಿ ಹಂಚಿದರು. ಶಾಲೆಯ ವತಿಯಿಂದ ನಗರಸಭೆ ಸದಸ್ಯರಿಗೆ ಗೌರವಿಸಲಾಯಿತು, ಸರಳ ಸಮಾರಂಭದಲ್ಲಿ ಪ್ರಮುಖರಾದ ರವಿಚಂದ್ರ ಚಟ್ನಳ್ಳಿ, ಮಲ್ಲಿಕಾರ್ಜುನ ಹೂಗಾರ, ಸಂಗಣ್ಣ ಮಾಳಗಿ, ದೀಪಕ್ ಗಾಳಿ, ಬಸವರಾಜ, ಸಾಗರ ಮತ್ತು ಶಾಲೆಯ ಮುಖ್ಯಗುರುಗಳು ಶಿಕ್ಷಕರು, ಮಕ್ಕಳು ಇದ್ದರು.