
ಬ್ಯಾಡಗಿ,ಜು12: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯ ಸರಕಾರ ಅನುಷ್ಠಾನಗೊಳಿಸುತ್ತಿರುವ “ಮನೆ ಮನೆಗೆ ಗಂಗೆ’ಯಡಿ ಮುಂದಿನ ಎರಡು ವರ್ಷದಲ್ಲಿ ಕ್ಷೇತ್ರದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ನಳ ಸಂಪರ್ಕದ ಮೂಲಕ ಪೂರೈಕೆಯಾಗಲಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಕೈಗೆತ್ತಿಕೊಂಡಿರುವ 1.22 ಕೋಟಿ ರೂ. ಗಳ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಜಲಜೀವನ್ ಮಿಷನ್ ಯೋಜನೆಯನ್ನು ಕೇಂದ್ರ ಸರಕಾರ 2019ರಲ್ಲಿ ರೂಪಿಸಿದ್ದು, ರಾಜ್ಯ ಸರಕಾರ ಅದಕ್ಕೆ “ಮನೆ ಮನೆಗೆ ಗಂಗೆ’ ಎಂದು ಹೆಸರಿಟ್ಟು ಗ್ರಾಮೀಣ ಭಾಗದ ಮನೆಗಳಿಗೆ ನೀರು ಪೂರೈಕೆ ಗುರಿಯನ್ನು ಹೊಂದಿದೆ. ಮುಂಬರುವ 2024ರೊಳಗೆ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಎಇಇ ಸುರೇಶ ಬೇಡರ ಮಾತನಾಡಿ, ಗ್ರಾಮದಲ್ಲಿ 587 ಮನೆಗಳಿಗೆ ಈ ಯೋಜನೆಯಡಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರಲ್ಲದೇ, ತಾಲೂಕಿನಾದ್ಯಂತ ಜಲಜೀವನ್ ಮಿಷನ್ (ಮನೆ ಮನೆಗೆ ಗಂಗೆ) ಯೋಜನೆಯನ್ನು 2024ಕ್ಕೆ ಪೂರ್ಣಗೊಳಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ತಾಲೂಕಿನ ಪ್ರತಿ ಹಳ್ಳಿ ಮನೆಯಲ್ಲೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಮಾಡುವುದು ತಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಮಲ್ಲನಗೌಡ ಗಂಟಿಗೌಡ್ರ ವಹಿಸಿದ್ದರು. ಮುಖಂಡರಾದ ಶಿವನಗೌಡ ವೀರನಗೌಡ್ರ, ಗಣೇಶಪ್ಪ ಚಿಕ್ಕಳ್ಳಿ, ಶಿವಬಸಪ್ಪ ಕುಳೆನೂರ, ಶೇಖರಗೌಡ ಗೌಡ್ರ, ನಾಗೇಂದ್ರಪ್ಪ ಹರಿಜನ, ಗಣೇಶಪ್ಪ ಬಣಕಾರ, ಕೊಟ್ರಯ್ಯ ಹಿರೇಮಠ, ರಾಮಪ್ಪ ಲಕ್ಕಮ್ಮನವರ, ಪಿಡಿಓ ರಾಜೀವ ಹಾದಿಮನಿ, ಗುತ್ತಿಗೆದಾರ ಪುಟ್ಟನಗೌಡ ಪಾಟೀಲ, ರಾಮಣ್ಣ ಗಾಜೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.