ಎರಡು ಬ್ಯಾಲೆಸ್ಟಿಕ್ ಕ್ಷಿಪಣಿಗಳ ಪ್ರಯೋಗಿಸಿದ ಉ.ಕೊರಿಯಾ

ವಾಷಿಂಗ್ಟನ್, ಜು.೧೯- ಬರೊಬ್ಬರಿ ನಾಲ್ಕು ದಶಕಗಳ ಬಳಿಕ ದಕ್ಷಿಣ ಕೊರಿಯಾದ ಬಂದರಿಗೆ ಅಮೆರಿಕಾದ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆ ಆಗಮಿಸಿದ್ದಕ್ಕೆ ತಿರುಗೇಟು ಎಂಬಂತೆ ಬುಧವಾರ ಬೆಳಗ್ಗೆ ಉತ್ತರ ಕೊರಿಯಾವು ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ.
ಉತ್ತರ ಕೊರಿಯಾದ ಎರಡೂ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್‌ನ ವಿಶೇಷ ಆರ್ಥಿಕ ವಲಯದ ಹೊರಗೆ ಬಿದ್ದಿವೆ ಎಂದು ಜಪಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಮೊದಲ ಕ್ಷಿಪಣಿಯು ೫೦ ಕಿಮೀ ಎತ್ತರವನ್ನು ತಲುಪಿ ೫೫೦ ಕಿಮೀ ವ್ಯಾಪ್ತಿಯನ್ನು ಕ್ರಮಿಸಿದರೆ ಎರಡನೆಯ ಕ್ಷಿಪಣಿಯು ೫೦ ಕಿಮೀ ಎತ್ತರಕ್ಕೆ ಏರಿತು ಮತ್ತು ೬೦೦ ಕಿ.ಮೀ. ದೂರಕ್ಕೆ ಹಾರಿತು ಎಂದು ಜಪಾನಿನ ರಕ್ಷಣಾ ಸಚಿವ ಯಸುಕಾಜು ಹಮಡಾ ಸುದ್ದಿಗಾರರಿಗೆ ತಿಳಿಸಿದರು. ಇನ್ನು ಉತ್ತರ ಕೊರಿಯಾ ಕ್ರಮವನ್ನು ದಕ್ಷಿಣ ಕೊರಿಯಾದ ಸೇನಾ ಜಂಟಿ ಮುಖ್ಯಸ್ಥರು (ಜೆಸಿಎಸ್) ಖಂಡನೆ ವ್ಯಕ್ತಪಡಿಸಿದ್ದಾರೆ. ಉತ್ತರ ಕೊರಿಯಾದ ಸತತ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗಳು ಕೊರಿಯನ್ ಪರ್ಯಾಯ ದ್ವೀಪ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುವ ಗಂಭೀರ ಪ್ರಚೋದನಕಾರಿ ಕೃತ್ಯಗಳಾಗಿವೆ. ಅಲ್ಲದೆ ಕ್ಷಿಪಣಿ ಉಡಾವಣೆಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ಜೆಸಿಎಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್ ಕರಾವಳಿ ತೀರಗಳಿಗೆ ಅಮೆರಿಕಾ ತನ್ನ ಸೇನಾ ಪರಿಕರಗಳನ್ನು ಸಾಗಿಸುವ ಕಾರ್ಯಕ್ಕೆ ಹೆಚ್ಚಿನ ವೇಗ ನೀಡಿದ್ದು, ಸಹಜವಾಗಿಯೇ ಇದಕ್ಕೆ ಉತ್ತರ ಕೊರಿಯಾ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ದಕ್ಷಿಣ ಕೊರಿಯಾ ಕಡಲ ತಟದಲ್ಲಿ ಅಮೆರಿಕಾ ಹೆಚ್ಚು ಸಕ್ರಿಯವಾಗಿದ್ದು, ಮಿಲಿಟರಿ ಅಭ್ಯಾಸದಲ್ಲಿ ಕೂಡ ತೊಡಗಿಸಿಕೊಂಡಿದೆ.