ಎರಡು ಬೈಕ್ ನಡುವೆ ಡಿಕ್ಕಿ:ಓರ್ವ ಸಾವು, ಇಬ್ಬರಿಗೆ ಗಾಯ

ಕಲಬುರಗಿ,ಏ.11-ಇಲ್ಲಿಗೆ ಸಮೀಪದ ಸಾವಳಗಿ ಕ್ರಾಸ್ ಬಳಿ ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾವಳಗಿ ಗ್ರಾಮದ ಶಿವಲಿಂಗಪ್ಪ ತಂದೆ ಶ್ರೀಮಂತ (56) ಎಂಬುವವರು ಮೃತಪಟ್ಟಿದ್ದು, ಅದೇ ಗ್ರಾಮದ ಶಿವರಾಜ ಮತ್ತು ಆಳಂದನ ಸಿದ್ರಾಮ ಎಂಬುವವರು ಗಾಯಗೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ಶಿವರಾಜ ಹಾಗೂ ಶಿವಲಿಂಗಪ್ಪ ಅವರು ಸಾವಳಗಿಯಿಂದ ಭಟ್ಟರ್ಗಾ ಕಡೆಗೆ ಬೈಕ್ ಮೇಲೆ ಹೋಗುತ್ತಿದ್ದರು. ಸಿದ್ರಾಮ ಆಳಂದನಿಂದ ಬೈಕ್ ಮೇಲೆ ಬರುತ್ತಿದ್ದರು. ಸಾವಳಗಿ ಕ್ರಾಸ್ ಬಳಿ ಎರಡೂ ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಶಿವಲಿಂಗಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.