ಎರಡು ಬಾರಿ ದೋಷಾರೋಪಣೆಗೆ ಗುರಿಯಾದ ಟ್ರಂಪ್

ವಾಷಿಂಗ್ಟನ್, ಜ. ೧೪- ಕ್ಯಾಪಿಟಲ್ ಗಲಭೆಗೆ ಸಂಬಂಧಿಸಿದಂತೆ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ದೋಷಾರೋಪಣೆ (ಮಹಾಭಿಯೋಗ) ಯನ್ನು ಹೊರಿಸಿದೆ. ಇದರಿಂದಾಗಿ ಟ್ರಂಪ್‌ಗೆ ಭಾರಿ ಮುಖಭಂಗವಾಗಿದೆ. ಈ ಮೂಲಕ ಅಮೆರಿಕದ ಇತಿಹಾಸದಲ್ಲೇ ಎರಡು ಬಾರಿ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಅಪಕೀರ್ತಿಗೆ ಗುರಿಯಾಗಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಒಂದಲ್ಲ ಒಂದು ರೀತಿಯಲ್ಲಿ ಟ್ರಂಪ್ ತಕರಾರು ತೆಗೆದಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೂ ಮೊರೆ ಹೋಗಿದ್ದರು. ಆದರೆ, ಟ್ರಂಪ್ ಅವರು ಮಾಡಿರುವ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇತ್ತೀಚೆಗೆ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್‌ಗೆ ಲಗ್ಗೆ ಹಾಕಿ ಪುಂಡಾಟಿಕೆ ಮೆರೆದು ಹಿಂಸಾಚಾರ ನಡೆಸಿದ್ದರು. ಈ ಘಟನೆಯಲ್ಲಿ ೫ ಮಂದಿ ಮೃತಪಟ್ಟಿದ್ದರು. ಇದು ಅಮೆರಿಕದ ಇತಿಹಾಸದಲ್ಲೆ ಕಂಡುಕೇಳರಿಯದ ಘಟನೆಗೆ ಸಾಕ್ಷಿಯಾಗಿತ್ತು. ಈಗ ಅವರ ವಿರುದ್ಧ ದೋಷಾರೋಪ ಹೊರಿಸಿದೆ.
ಅಧಿಕೃತವಾಗಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲು ಟ್ರಂಪ್‌ಗೆ ಕೊನೆಯ ಅವಕಾಶವನ್ನು ಡೆಮೊಕ್ರಾಟ್ಸ್ ನೀಡಿದ್ದಾರೆ.
ಟ್ರಂಪ್ ಅಧಿಕಾರದ ಅವಧಿ ಪೂರ್ಣಗೊಳ್ಳಲು ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಅವರು ಹುದ್ದೆ ಯಾವಾಗ ತ್ಯಜಿಸುತ್ತಾರೆ ಎಂಬುದು ದೃಢಪಟ್ಟಿಲ್ಲ.
ಕ್ಯಾಪಿಟಲ್ ಮೇಲೆ ನಡೆದ ದಾಳಿ ದೊಡ್ಡ ಸಮಸ್ಯೆಯನ್ನೇ ಹುಟ್ಟು ಹಾಕಿದ್ದು, ಟ್ರಂಪ್ ಬೆಂಬಲಿಗರ ಕೃತ್ಯ ಇದಾಗಿದ್ದು, ಟ್ರಂಪ್ ಅವರು ಅಮೆರಿಕ ಸಂಸತ್‌ನಲ್ಲಿ ಭಾರಿ ಮುಖಭಂಗಕ್ಕೆ ಒಳಗಾಗಿದ್ದಾರೆ.
ಟ್ರಂಪ್ ೨ನೇ ಬಾರಿಗೆ ವಾಗ್ದಂಡನೆಗೂ ಗುರಿಯಾಗಿದ್ದಾರೆ. ಜನಪ್ರತಿನಿಧಿಗಳ ಸಭೆಯಲ್ಲಿ ವಾಗ್ದಂಡನೆ ವಿಧಿಸುವ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗಿದ್ದು, ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನ ಬಹುತೇಕ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಎರಡು ತಾಸುಗಳ ಕಾಲ ನಡೆದ ಚರ್ಚೆಯ ನಂತರ ೪೩೩ ಸದಸ್ಯರು ಹಾಜರಿದ್ದ ಸೆನೆಟ್‌ನಲ್ಲಿ ನಡೆದ ಮತದಾನದಲ್ಲಿ ಟ್ರಂಪ್ ವಿರುದ್ಧ ೨೩೨ ಮತಗಳು ಬಂದಿವೆ.
ಈ ಪೈಕಿ ೧೦ ರಿಪಬ್ಲಿಕನ್ ಮತಗಳೂ ಸೇರಿದ್ದು, ಟ್ರಂಪ್ ಪರವಾಗಿ ೧೯೭ ಮತಗಳು ಬಂದಿವೆ. ಈ ಮೂಲಕ ಎರಡು ಬಾರಿ ವಾಗ್ದಂಡನೆ ಎದುರಿಸಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾಗಿದ್ದಾರೆ.