ಎರಡು ಬಸ್‌ಗಳು ಡಿಕ್ಕಿ ಮೂವರು ಸಾವು ೧೭ ಮಂದಿಗೆ ಗಾಯ

ಶ್ರೀನಗರ,ನ.೧೦-ಎರಡು ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ೧೩ ವರ್ಷದ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿ ೧೭ ಮಂದಿ ಗಾಯಗೊಂಡಿರುವ ದಾರುಣ ಘಟನೆ ಸಾಂಬಾ ಜಿಲ್ಲೆಯ ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಜಮ್ಮು-ಪಠಾಣ್‌ಕೋಟ್ ಹೆದ್ದಾರಿಯಲ್ಲಿ ನಾನಕೆ ಚಾಕ್‌ನಲ್ಲಿ ಅತಿ ವೇಗವಾಗಿ ಬಂದ ಒಂದು ಬಸ್ ಅನ್ನು ಇನ್ನೊಂದು ಬಸ್ ಹಿಂದಿಕ್ಕಲು ಹೋದಾಗ ಈ ಅಪಘಾತ ಸಂಭವಿಸಿದೆ. ಒಂದು ಬಸ್ ಸಹರಾನ್‌ಪುರಕ್ಕೆ ತೆರಳುತ್ತಿದ್ದರೆ ಇನ್ನೊಂದು ಬಸ್ ಕಥುವಾ ಜಿಲ್ಲೆಗೆ ಪ್ರಯಾಣಿಸುತ್ತಿತ್ತು.ಮೃತರನ್ನು ಪಂಜಾಬ್‌ನ ಬಟಾಲಾ ಮೂಲದ ಮಂಗಿ ದೇವಿ (೩೬), ಅವರ ೧೪ ವರ್ಷದ ಮಗಳು ತಾನಿಯಾ ಮತ್ತು ರಾಜ್‌ಪುರದ ೫೮ ವರ್ಷದ ಕಸ್ತೂರಿ ಲಾಲ್ ಎಂದು ಗುರುತಿಸಲಾಗಿದೆ. ಓವರ್‌ಟೇಕ್ ಮಾಡಲು ಚಾಲಕ ಪ್ರಯತ್ನಿಸುವಾಗ ಅತಿವೇಗದಿಂದ ಅಪಘಾತ ಸಂಭವಿಸಿದೆ. ಗಾಯಗೊಂಡವರಲ್ಲಿ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ.ಭರತ್ ಭೂಷಣ್ ತಿಳಿಸಿದ್ದಾರೆ.
ಘಟನೆ ಕುರಿತಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂತಾಪ ವ್ಯಕ್ತಪಡಿಸಿದ್ದು, ದೋಡಾ ಮತ್ತು ಸಾಂಬಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆದ ಸಾವು-ನೋವಿನಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, “ದೋಡಾ ಮತ್ತು ಸಾಂಬಾ”ದಲ್ಲಿ ಸಂಭವಿಸಿದ ದುರದೃಷ್ಟಕರ ರಸ್ತೆ ಅಪಘಾತದಲ್ಲಿ ಉಂಟಾದ ಜೀವಹಾನಿಯಿಂದ ತೀವ್ರ ನೋವಾಗಿದೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.