ಎರಡು ದಿನಕ್ಕೆ ಸಾರಿಗೆ ವಿಭಾಗಕ್ಕೆ ೧.೨೦ ಕೋಟಿ ನಷ್ಟ

ಮುಂದುವರೆದ ಖಾಸಗಿ ವಾಹನ ಮಾಲೀಕರ ಸುಲಿಗೆ – ಪ್ರಯಾಣಿಕರು ಪರದಾಟ
ರಾಯಚೂರು.ಏ.೦೮- ಸಾರಿಗೆ ಇಲಾಖೆಯ ನೌಕರರ ಮುಷ್ಕರದಿಂದ ಎರಡು ದಿನಕ್ಕೆ ರಾಯಚೂರು ಸಾರಿಗೆ ವಿಭಾಗಕ್ಕೆ ೧.೨೦ ಕೋಟಿ ರೂ. ನಷ್ಟವಾಗಿದ್ದು, ಅನಿರ್ದಿಷ್ಟ ಮುಷ್ಕರ ಹಿನ್ನೆಲೆಯಲ್ಲಿ ಈ ನಷ್ಟದ ಪ್ರಮಾಣ ಇನ್ನೆಷ್ಟು ಎನ್ನುವ ಆತಂಕ ಇಲಾಖೆಯನ್ನು ಕಾಡುವಂತೆ ಮಾಡಿದೆ.
೬ ನೇ ವೇತನಕ್ಕೆ ಆಗ್ರಹಿಸಿ, ಸಾರಿಗೆ ಸಿಬ್ಬಂದಿಗಳು ಮುಷ್ಕರದಲ್ಲಿ ತೊಡಗಿದ್ದಾರೆ. ನಿನ್ನೆಯಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರತಿನಿತ್ಯ ೬೦ ಲಕ್ಷ ಆದಾಯ ಕಾಣುವ ಸಾರಿಗೆ ವಿಭಾಗದ ಖಜಾನೆಗೆ ನಿನ್ನೆ ಶೂನ್ಯ ಆದಾಯದ ಹಿನ್ನೆಲೆಯಲ್ಲಿ ನೇರವಾಗಿ ೧ ದಿನಕ್ಕೆ ೬೦ ಲಕ್ಷ ಆದಾಯ ನಷ್ಟ ಎದುರಿಸುವಂತಾಗಿದೆ. ಎರಡನೇ ದಿನವಾದ ಇಂದು ಸಹ ೬೦ ಲಕ್ಷ ನಷ್ಟದಿಂದ ಎರಡೇ ದಿನಕ್ಕೆ ೧.೨೦ ಕೋಟಿ ನಷ್ಟಕ್ಕೆ ಗುರಿಯಾಗುವಂತಾಗಿದೆ. ಮತ್ತೊಂದೆಡೆ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
೪೮ ಗಂಟೆಗಳಿಂದ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಬೇರೆಡೆ ಸಂಚರಿಸಲು ಸಾಧ್ಯವಿಲ್ಲದ ಪ್ರಸಂಗ ನಿರ್ಮಾಣವಾಗಿದೆ. ಬಸ್ ನಿಲ್ದಾಣಕ್ಕೆ ಬಂದು ಮುಷ್ಕರ ಮುಂದುವರೆದಿರುವುದನ್ನು ನೋಡಿ, ಮನೆಗೆ ಮರಳುವಂತಾಗಿದೆ. ಖಾಸಗಿ ವಾಹನಗಳ ಪ್ರಯಾಣ ದುಬಾರಿಯಾಗಿದ್ದರಿಂದ ಜನ ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದರೆ, ಇನ್ನೂ ಕೆಲವರು ಅನಿವಾರ್ಯವಾಗಿ ದುಪ್ಪಟ್ಟು ಬೆಲೆತೆತ್ತು ಸಂಚರಿಸುವಂತಾಗಿದೆ. ರಾಯಚೂರು ಜಿಲ್ಲೆಯಲ್ಲಿ ಸರ್ಕಾರದಿಂದ ಯಾವುದೇ ಪರ್ಯಾಯ ವಾಹನಗಳ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ವಾಹನ ಮಾಲೀಕರ ಲೂಟಿಗೆ ಪ್ರಯಾಣಿಕರು ಗುರಿಯಾಗುವಂತಾಗಿದೆ.
ಆರ್‌ಟಿಓ ಮತ್ತು ಜಿಲ್ಲಾಡಳಿತಕ್ಕೆ ಈ ದುಪ್ಪಟ್ಟು ಬೆಲೆ ಮಾಹಿತಿಯಿದ್ದರೂ, ಏನು ಮಾಡದೇ, ಕೈಕಟ್ಟಿ ಕುಳಿತಿದ್ದರಿಂದ ಪ್ರಯಾಣಿಕರು ಇತ್ತ ಬೆಲೆ ಏರಿಕೆಯ ದುಬಾರಿ ಜೀವನದಲ್ಲಿ ಈಗ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಕ್ಕೂ ದುಬಾರಿ ಹಣ ತೆತ್ತಬೇಕಾಗಿದೆ. ಪರ್ಯಾಯ ವಾಹನ ವ್ಯವಸ್ಥೆ ಮಾಡಲಾಗುತ್ತದೆನ್ನುವ ಸರ್ಕಾರದ ವ್ಯವಸ್ಥೆ ಜಿಲ್ಲೆಯಲ್ಲಿ ಎಲ್ಲಿಯೂ ಅನುಷ್ಠಾನಗೊಂಡಿಲ್ಲ. ಬಸ್ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ವಾಹನ ಮಾಲೀಕರು ಇದನ್ನೇ ಅವಕಾಶ ಬಳಕೆ ಮಾಡಿಕೊಂಡು ೫೦ ರೂ. ಪ್ರಯಾಣದ ವೆಚ್ಚವಿದ್ದರೇ, ೧೫೦ ರೂ. ವಸೂಲಿ ಮಾಡುವ ದಂಧೆಗಿಳಿದ್ದಾರೆ.
ಬೇಕಿದ್ದರೇ, ಬನ್ನಿ ಇಲ್ಲವಾದರೇ ಬಿಡಿ ಎನ್ನುವ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದಾರೆ. ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಜನ ಖಾಸಗಿ ಅವರು ನಿಗದಿ ಪಡಿಸಿದ ದರಕ್ಕೆ ತಲೆಭಾಗಿ ವಾಹನಗಳಲ್ಲಿ ಸಂಚರಿಸಬೇಕಾಗಿದೆ. ಕೊರೊನಾ ಅಪಾಯದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಅನುಸರಿಸದೇ, ಪ್ರಾಣಿಗಳ ಮಾದರಿಯಲ್ಲಿ ಒಂದು ವಾಹನದಲ್ಲಿ ಪ್ರಯಾಣಿಕರನ್ನು ತುಂಬಿ ಕೊಂಡೊಯ್ಯಲಾಗುತ್ತಿದೆ. ಇದಲ್ಲೆವನ್ನೂ ನೋಡುತ್ತಿದ್ದರೂ, ಇತ್ತ ಪೊಲೀಸ್, ಜಿಲ್ಲಾಡಳಿತ, ಆರ್‌ಟಿಓ ಯಾರು ಸಹ ಪ್ರಯಾಣಿಕರ ನೆರವಿಗೆ ಬಾರದ ದುರದೃಷ್ಟ ಸ್ಥಿತಿಗೆ ಜನ ಹಿಡಿಶಾಪ ಹಾಕುವಂತಾಗಿದೆ.