ಎರಡು ತಿಂಗಳ ಬಿಲ್ ಜೂನ್‍ನಲ್ಲಿ ಆಕರಣೆಯಿಂದ ಹೆಚ್ಚಿನ ಬಿಲ್ : ವಿದ್ಯುತ್ ದರ ಏರಿಕೆ ಕುರಿತು ಸ್ಪಷ್ಠಣೆ

ವಿಜಯಪುರ:ಜೂ.21: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮೇ.12ರಂದು ಪ್ರತಿ ಯುನಿಟ್‍ಗೆ 70 ಪೈಸೆ ಏರಿಕೆ ಮಾಡಿದ್ದು, ಈ ಏರಿಕೆ ಏಪ್ರಿಲ್ 1ರಿಂದಲೇ ಅನ್ವಯಿಸಿದೆ. ಏಪ್ರಿಲ್, ಮೇ ತಿಂಗಳ ಬಿಲ್‍ನ್ನು ಜೂನ್‍ನಲ್ಲಿ ಆಕರಣೆ ಮಾಡಿರುವುದರಿಂದ ಹೆಚ್ಚಿನ ಬಿಲ್ ಬಂದಿದೆ ಎಂದು ವಿದ್ಯುತ್ ದರ ಏರಿಕೆ ಕುರಿತು ಹೆಸ್ಕಾಂ ಅಧೀಕ್ಷಕ ಅಭಿಯಂತರರು ಸ್ಪಷ್ಠಣೆ ನೀಡಿದ್ದಾರೆ.
ಎರಡು ತಿಂಗಳ ಬಿಲ್ ಒಂದೇ ತಿಂಗಳಲ್ಲಿ ಆಕರಣೆ ಮಾಡಿರುವುದರಿಂದ ಹೆಚ್ಚಿನ ಬಿಲ್ ಬಂದಿದೆ. ಇದು ತಾತ್ಕಾಲಿಕವಾಗಿದ್ದು, ಮುಂದಿನ ತಿಂಗಳಿನಿಂದ ಬಿಲ್‍ನಲ್ಲಿ ಇಳಿಕೆಯಾಗಲಿದೆ. ವಿದ್ಯುತ್ ದರ ಏರಿಕೆ ದಿಢೀರ ಆಗಿರುವುದಿಲ್ಲ. 2006ರಿಂದ ಕೆಇಆರ್‍ಸಿ ಪ್ರತಿ ವರ್ಷ ನವೆಂಬರ್‍ನಲ್ಲಿ ನಡೆಸುವ ಪ್ರಕ್ರಿಯೆಯಾಗಿದೆ. ಎಲ್ಲ ಎಸ್ಕಾಂಗಳು ವಿದ್ಯುತ್ ದರ ಏರಿಕೆ ಮಾಡುವ ಕುರಿತು ಪ್ರತಿ ವರ್ಷ ನವೆಂಬರ್‍ನಲ್ಲಿ ಕೆಇಆರ್‍ಸಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗೆ ವಿದ್ಯುತ್ ಗ್ರಾಹಕರಿಂದ ಆಕ್ಷೇಪಣೆಗಳನ್ನು ಸಹ ಆಹ್ವಾನಿಸಲಾಗುತ್ತದೆ. ಈ ವರ್ಷ ಮೇ. 12ರಂದು ದರ ಪರಿಷ್ಕರಣೆಗೊಳಿಸಿ ಆದೇಶಿಸಲಾಗಿದೆ.
ಈಗಾಗಲೇ ಗ್ರಾಹಕರ ಹಿತದೃಷ್ಟಿಯಿಂದ ಬಿಲ್ಲನ್ನು ಆಯಾ ತಿಂಗಳಲ್ಲಿ ಸಂಪೂರ್ಣ ಆಕರಣೆ ಮಾಡದೆ, ನಿಯಮಾವಳಿಗಳಲ್ಲಿನ ಅವಕಾಶ ಉಪಯೋಗಿಸಿಕೊಂಡು ಗ್ರಾಹಕರ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.
ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ ಕೆ.ಇ.ಆರ್.ಸಿ. ಕಾಲಕಾಲಕ್ಕೆ ಅನುಮೋದಿತ ವಿದ್ಯುತ್ ದರ ಜಾರಿಗೊಳಿಸುತ್ತದೆ. ಎಸ್ಕಾಂಗಳು ವಿದ್ಯುತ್ ಉತ್ಪಾದಕರಿಂದ ಖರೀದಿಸುವ ವಿದ್ಯುತ್ ಮೇಲಿನ ಇಂಧನ ವೆಚ್ಚದಲ್ಲಿ ಆಗುವ ಬೆಲೆ ವ್ಯತ್ಯಾಸ ಸರಿದೂಗಿಸಲು ಈ ವ್ಯವಸ್ಥೆ ಜಾರಿಯಲ್ಲಿದೆ.
ಮುಂದಿನ ದಿನಗಳಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ತಡೆರಹಿತ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅವಶ್ಯಕ ಕ್ರಮ ಕೈಗೊಳ್ಳಲಾಗುವುದರಿಂದ ಎಲ್ಲ ಗ್ರಾಹಕರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯೊಂದಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.