
ಗುರುಮಠಕಲ್, ಮಾ,.11 : ಕಳೆದ ಎರಡು ತಿಂಗಳಿನಿಂದ ಅಂಗನವಾಡಿಗೆ ಸಮರ್ಪಕ ಆಹಾರ ಪೂರೈಕೆ ಮಾಡದೇ ಇರುವದರಿಂದ ಮಕ್ಕಳಿಗೆ ಸಮಸ್ಯೆ ಆಗಿದ್ದು, ಕೂಡಲೇ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅದ್ಯಕ್ಷ ನಾಗೇಶ ಗದ್ದಿಗಿ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಾಲ್ಲೂಕಿನಾದ್ಯಂತ ವಿವಿಧೆಡೆಯಿಂದ ಸಂಘಟನೆಗೆ ಮಾಹಿತಿ ಲಭಿಸಿದ್ದು, ಎರಡು ತಿಂಗಳಿನಿಂದ ಕೇವಲ ಹಾಲು ಮಾತ್ರ ನೀಡುತ್ತಿದ್ದು ಪೌಷ್ಟಿಕ ಆಹಾರ ಹಾಗೂ ಮೊಟ್ಟೆ ವಿತರಣೆ ಮಾಡುತ್ತಿಲ್ಲ ಎಂದು ದೂರುಗಳು ಬಂದಿದ್ದು ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ವಿಚಾರಿಸಿದರೆ ಸರ್ಕಾರದಿಂದ ಪೂರೈಕೆ ಆಗಿಲ್ಲ ಎಂದು ಉತ್ತರಿಸುತ್ತಿದ್ದಾರೆ.
ಗಂಡ ಹೆಂಡತಿ ಮದ್ಯೆ ಕೂಸು ಬಡವಾಯಿತು ಎಂಬಂತೆ ಸರ್ಕಾರ ಮತ್ತು ಅಧಿಕಾರಿಗಳ ಮದ್ಯೆ ಸಮನ್ವಯ ಕೊರತೆ ಕಾರಣದಿಂದಲೋ ಇಲ್ಲವೇ ನಿರ್ಲಕ್ಷ್ಯದಿಂದಲೊ ಮಕ್ಕಳಿಗೆ ಆಹಾರ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲೇ ಅಪೌಷ್ಟಿಕತೆಯಿಂದ ಬಳಲುವ ಈ ಭಾಗದ ಮಕ್ಕಳಿಗೆ ಇದೀಗ ಆಹಾರವನ್ನೂ ಸಹ ಪೂರೈಕೆ ಮಾಡಲು ಆಗದ ಅಧಿಕಾರಿಗಳ ಕ್ರಮ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವುಕಡೆ ಹಾಲು ಸಹ ವಿತರಣೆ ಮಾಡುತ್ತಿಲ್ಲ ಎಂದು ಮಾಹಿತಿ ಇದ್ದು, ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕುರಿತು ಗಮನ ಹರಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಜಯ ಕರ್ನಟಕ ಸಂಘಟನೆಯ ಮುಖಂಡರಾದ ಗೋಪಾಲಕೃಷ್ಣ ಮೇದಾ, ನರಸಿಂಹಲು ಗಂಗಾನೋಳ, ಕಾಶಪ್ಪ ದೊರೆ, ಮಹೇಶಗೌಡ ಎಸ್.ಪಿ., ಅವಿನಾಶ ಗೌಡ, ಮಲ್ಲು ಚಪೇಟ್ಲಾ, ಉದಯ್ ಕುಮಾರ್ ಕೊಂಕಲ. ರಿಯಾಜ್ ಅಹ್ಮದ್, ಅಯಾಜ್, ಅಂಜಿ ಮಂಗಮೊಳ್, ಬನ್ನಪ್ಪ ಮಡಗು ಸೇರಿದಂತೆ ಇನ್ನಿತರ ಮುಖಂಡರು ಒತ್ತಾಯಿಸಿದ್ದಾರೆ.