ಎರಡು ಕೋಮುಗಳ ಮಧ್ಯೆ ಮಾರಾಮಾರಿ – ಗಾಯಾಳುಗಳು ಆಸ್ಪತ್ರೆಗೆ ದಾಖಲು

ಬಪ್ಪುರು : ಸರಕಾರಿ ಜಮೀನು ಸಾಗುವಳಿ ವಿವಾದ – ಪರಸ್ಪರ ದ್ವೇಷ
ರಾಯಚೂರು.ಜು.೨೩- ಸರಕಾರಿ ಜಮೀನು ಸಾಗುವಳಿಗಾಗಿ ೨ ಕೋಮುಗಳ ಮಧ್ಯೆ ಮಾರಾಮಾರಿಯಲ್ಲಿ ಅನೇಕರು ತೀವ್ರ ಗಾಯಗೊಂಡು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮಸ್ಕಿ ತಾಲೂಕಿನ ಬಪ್ಪುರು ಗ್ರಾಮದ ಬಸವರಾಜ ನಾಯಕ ತೀವ್ರ ಗಾಯಗೊಂಡು ಸಿಂಧನೂರು ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ಕಳುಹಿಸಿಕೋಡಲಾಗಿದೆ. ಎರಡು ಕೋಮುಗಳ ಮಧ್ಯೆ ಜಮೀನಿಗಾಗಿ ಗಲಾಟೆ ನಡೆದು ಎರಡು ಕಡೆಯವರಿಗೂ ಗಾಯಗಳಾಗಿದ್ದು, ಇದರಿಂದ ಬಪ್ಪುರು ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿದೆ. ಬಪ್ಪುರು ಗ್ರಾಮದ ಸರ್ವೇ ನಂ ೮೮ ರಲ್ಲಿ ಒಂದು ಕೋಮಿನ ಕೆಲವರಿಗೆ ಸರಕಾರಿ ಭೂಮಿ ಹಂಚಿಕೆಯಾಗಿದ್ದು, ಅವರು ಸಾಗುವಳಿ ಮಾಡುತ್ತಿದ್ದಾರೆ. ಇನ್ನುಳಿದ ೮.೨೧ ಗುಂಟೆ ಸರಕಾರಿ ಜಮೀನು ಇದ್ದು, ಇದು ಯಾರಿಗೂ ಇಲ್ಲಿತನಕ ಹಂಚಿಕೆಯಾಗಿಲ್ಲ. ಈ ಜಮಿನಿನಲ್ಲಿ ಮತ್ತೊಂದು ಸಮುದಾಯದ ಬಸವರಾಜ ಎನ್ನುವ ವ್ಯಕ್ತಿ ಸೇರಿದಂತೆ ಇನ್ನು ಕೆಲವರು ಸಾಗುವಳಿ ಮಾಡುತ್ತಾ ಬಂದಿದ್ದಾರೆ.
ಸರಕಾರಿ ಜಮಿನಿನಲ್ಲಿ ಸಾಗುವಳಿ ಮಾಡುತ್ತಿದ್ದು, ಕೆಲ ದಿನಗಳಿಂದ ಭೂಮಿ ಹದ ಮಾಡಲು ಟ್ರ್ಯಾಕ್ಟರ್ ಟಿಲ್ಲರ್ ಹೊಡೆಯಲು ಹೋದಾಗ ಲಾಲಸಾಬ್, ಕರೀಂ ಸಾಬ್ , ರಾಜ ಭಕ್ಷಿ, ಮೌಲಸಾಬ್ ಸೇರಿದಂತೆ ಇನ್ನು ಕೆಲವರು ಟ್ರ್ಯಾಕ್ಟರ್ ಹೊಡೆಯಬೇಡಿ, ಈ ಜಮೀನು ನಮಗೆ ಸೇರಿದ್ದು ಎಂದು ಗಲಾಟೆ ಮಾಡಿದಾಗ ಜಮೀನು ಯಾರಿಗೂ ಸೇರಿಲ್ಲ. ಪಹಣಿಯಲ್ಲಿ ಕರ್ನಾಟಕ ಸರ್ಕಾರ ಎಂದು ಇದೆ. ಗಲಾಟೆ ಮಾಡದೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಗ್ರಾಮದ ಮುಖಂಡರು ಎರಡು ಕಡೆಯವರಿಗೆ ಬುದ್ಧಿವಾದ ಹೇಳಿ ಜಗಳ ಬಿಡಿಸಿದ್ದಾರೆ ಎನ್ನಲಾಗಿದೆ.
ಜು.೨೨ ರಂದು ಲಾಲ ಸಾಬ್, ಕರೀಂ ಸಾಬ್, ರಾಜಭಕ್ಷಿ, ಮೌಲಸಾಬ್, ಖಾಸಿಂ ಸಾಬ್ ಸೇರಿದಂತೆ ೩೦ ಜನರ ಗುಂಪು ಅಕ್ರಮ ಕೂಟ ಕಟ್ಟಿಕೊಂಡು ರಾತ್ರಿ ೧೦ ಗಂಟೆ ಸುಮಾರಿಗೆ ದೇವಮ್ಮ ಗಂಡ ವೆಂಕನಗೌಡರ ಮನೆಗೆ ಹೋಗಿ ನಿನ್ನ ಮಗ ಮಂಜುನಾಥ ಎಲ್ಲಿ ಎಂದು ಕೇಳಿದ್ದಾರೆ. ಮಂಜುನಾಥ ಮನೆಯಲ್ಲಿ ಇಲ್ಲದ್ದನ್ನು ಕಂಡು ವಾಪಸ್ಸು ಬರುವಾಗ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ಕುಳಿತ್ತಿದ್ದ ಬಸವರಾಜ, ಮಂಜುನಾಥ, ಮಲ್ಲಣ್ಣ, ವಿರುಪಣ್ಣ ಸೇರಿದಂತೆ ಇತರರ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದು, ಜಗಳ ಬಿಡಿಸಲು ಬಂದ ಮಹಿಳೆಯರ ಮೇಲೆ ಹಲ್ಲೆ ಮಾಡಲಾಗಿದೆ .
ತೀವ್ರ ಗಾಯಗೊಂಡ ಬಸವರಾಜ ಎನ್ನುವ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ದಾಖಲು ಮಾಡಲಾಗಿದ್ದು, ಗಾಯಗೊಂಡ ಮಂಜುನಾಥ, ಮಲ್ಲನಗೌಡ, ವಿರುಪಣ್ಣ, ಬಸನಗೌಡ, ದೇವಮ್ಮ, ದೊಡ್ಡಮ್ಮ, ಶಂಕ್ರಮ್ಮ, ಅಯ್ಯಮ್ಮ, ಲಕ್ಷ್ಮಿ, ದ್ಯಾವಮ್ಮ ಇವರನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಲಾಲಮ್ಮ ಗಂಡ ಲಾಲಸಾಬ್ ಎನ್ನುವ ಮಹಿಳೆಗೆ ತಲೆಗೆ ಪೆಟ್ಟು ಬಿದ್ದಿದ್ದು ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ವಿಹಾಳ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಹಲ್ಲೆ, ದೌರ್ಜನ್ಯ, ಜಾತಿ ನಿಂದನೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಎರಡು ಕೋಮಿನವರು ದೂರು, ಪ್ರತಿದೂರು ನೀಡಿದ್ದಾರೆ.