ಎರಡು ಕುಟುಂಬಗಳ ನಡುವೆ ಘರ್ಷಣೆ: ಓರ್ವ ಸಾವು

ದಾವಣಗೆರೆ, ಜ. ೪- ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ನಿವೃತ್ತ ಶಿಕ್ಷಕ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಮಿನಿಗರಹಳ್ಳಿಯಲ್ಲಿ ನಡೆದಿದೆ.
ಕೃಷ್ಣಪ್ಪ (೬೮) ಎಂಬುವವರೇ ಸಾವನ್ನಪ್ಪಿರುವ ನಿವೃತ್ತ ಶಿಕ್ಷಕ. ಇವರ ಪುತ್ರ ವಿಜಯೇಂದ್ರ ಗಂಭೀರವಾಗಿ ಗಾಯಗೊಂಡು ಜಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪಂಚಾಯಿತಿ ವ್ಯಾಪ್ತಿಯ ಮಿನಿಗರಹಳ್ಳಿ ಗ್ರಾಮದಲ್ಲಿ ಕಳೆದ ಪಂಚಾಯಿತಿ ಚುನಾವಣೆಯಲ್ಲಿ ಸೋತ ಗುಂಪಿನಿಂದ ನಿವೃತ್ತ ಶಿಕ್ಷಕ ಕೃಷ್ಣಪ್ಪ ಅವರ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೃತ ಕೃಷ್ಣಪ್ಪ ಸಂಬಂಧಿ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಸೋಲು ಕಂಡವರು ಇಂದು ಉದ್ದೇಶಪೂರ್ವಕವಾಗಿ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಈ ಜಗಳದಲ್ಲಿ ಮೃತವ್ಯಕ್ತಿ ಕೃಷ್ಣಪ್ಪ ಅವರ ಪುತ್ರನೂ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.
ಹಲ್ಲೆಗೊಳಗಾದ ಕೃಷ್ಣಪ್ಪ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಅನಂತರ, ಸಂಬಂಧಿಕರಿಗೆ ಒಪ್ಪಿಸಲಾಗಿದೆ.
ಈ ಸಂಬಂಧ ಸ್ಥಳಕ್ಕೆ ಭೇಟಿನೀಡಿದ ಜಗಳೂರು ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.