ಎರಡು ಕಡೆ ವೇಶ್ಯಾವಾಟಿಕೆ: ಮೂವರು ಯುವತಿಯರ ರಕ್ಷಣೆ

ಕಲಬುರಗಿ,ಮೇ.25: ನಗರದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಯುವತಿಯರನ್ನು ರಕ್ಷಿಸಿದ ಘಟನೆ ವರದಿಯಾಗಿದೆ. ಮಹಾಲಕ್ಷ್ಮೀ ಲೇಔಟ್ ಹಾಗೂ ಕಲ್ಯಾಣಿ ಪೆಟ್ರೋಲ್ ಪಂಪ್ ಹತ್ತಿರ ಇರುವ ಶರಣನಗರದಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ಪೋಲಿಸರು ಪತ್ತೆ ಹಚ್ಚಿದ್ದಾರೆ.
ರಾಘವೇಂದ್ರ ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಮಹಾಲಕ್ಷ್ಮೀ ಲೇಔಟ್‍ನ ಘನಶ್ಯಾಂ ಅಪಾರ್ಟ್‍ಮೆಂಟ್‍ನಲ್ಲಿ ಪೋಲಿಸರು ದಾಳಿ ಮಾಡಿ ಇಬ್ಬರು ಯುವತಿಯರು ಹಾಗೂ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ವೇಶಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬ್ರಹ್ಮಪೂರ್ ವಡ್ಡರಗಲ್ಲಿಯ ನಿವಾಸಿ ಗೀತಾದೇವಿ ಗಂಡ ವೀರೇಶ್ ಹೊಸಮನಿ (40) ಎಂಬ ಮಹಿಳೆಯ ವಿರುದ್ಧ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಚಿತ ಭಾತ್ಮಿ ಮೇರೆಗೆ ಸಿಸಿಬಿ ಸಹಾಯಕ ಪೋಲಿಸ್ ಆಯುಕ್ತ ಸಂತೋಷ್ ಬನ್ನಟ್ಟಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸುನೀಲಕುಮಾರ್, ಅಶೋಕ್, ಅಂಬಾಜಿ, ಶಿವಕುಮಾರ್, ಅಶೋಕ್ ಕಟಕೆ, ವಿಶ್ವನಾಥ್, ಶ್ರೀಶೈಲ್, ಅರವಿಂದ್, ನಾಗರಾಜ್, ಮಹಿಳಾ ಸಿಬ್ಬಂದಿಗಳಾದ ಅನ್ನದಾನೇಶ್ವರಿ, ಅಂಜಲಿ ಅವರು ಕಾರ್ಯಾಚರಣೆ ಕೈಗೊಂಡರು.
ಶರಣನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆಯ ಮೇಲೆ ಪೋಲಿಸರು ಕಾರ್ಯಾಚರಣೆ ಕೈಗೊಂಡು ಓರ್ವ ಯುವತಿ ಹಾಗೂ ಓರ್ವ ಪುರುಷನಿಗೆ ವಶಕ್ಕೆ ತೆಗೆದುಕೊಂಡಿದ್ದಾರೆ. ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ರೇಣುಕಾ ಗಂಡ ಭೀಮಾಶಂಕರ್ ಸಾಗರ್ (37) ಎಂಬ ಮಹಿಳೆ ವಿರುದ್ಧ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.