
ಅಫಜಲಪುರ:ಆ.17: ತಾಲೂಕಿನ ಅಳ್ಳಗಿ(ಕೆ) ಗ್ರಾಮದ ಅನತಿ ದೂರದಲ್ಲಿ ಹೆದ್ದಾರಿ ಪಕ್ಕದ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರನು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ತಾಲೂಕಿನ ವಡ್ಡಳ್ಳಿ ಗ್ರಾಮದ ಚನ್ನಮಲ್ಲಪ್ಪ ಜಟ್ನಾಕ(42) ಎಂದು ಗುರುತಿಸಲಾಗಿದ್ದು ಅದೇ ಗ್ರಾಮದ ರಾಜು ಜಟ್ನಾಕ(35) ಎಂಬ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ವಾಹನ ಸವಾರರಿಬ್ಬರು ಕೂಡಿಕೊಂಡು ಅಮಾವಾಸ್ಯೆ ಹಿನ್ನೆಲೆ ತಾಲೂಕಿನ ಉಡಚಣ ಗ್ರಾಮದ ಶ್ರೀ ಹುಚ್ಚಲಿಂಗೇಶ್ವರ ದೇವರ ದರ್ಶನ ಮುಗಿಸಿಕೊಂಡು ಬರುವಾಗ ಮಾರ್ಗ ಮಧ್ಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅದರಂತೆ ಬುಧವಾರ ಮಧ್ಯಾಹ್ನ ಮಹಾರಾಷ್ಟ್ರ ಮೂಲದ ಎರಡು ಕಾರುಗಳು ಬಳೂರಗಿ ಹಾಗೂ ಮಾದಾಬಾಳ ತಾಂಡಾದ ಮಾರ್ಗ ಮಧ್ಯದಲ್ಲಿ ಚಾಲಕರ ನಿರ್ಲಕ್ಷ್ಯತನದಿಂದ ಮುಖಾ ಮುಖಿಯಾಗಿ ಡಿಕ್ಕಿಯಾದ ಪರಿಣಾಮ ಎರಡು ಕಾರುಗಳು ಜಖಂಗೊಂಡಿವೆ. ಕಾರಿನಲ್ಲಿದ್ದ ಕೆಲವರಿಗೆ ಗಂಭೀರ ಹಾಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೂಡಲೇ ಅವರನ್ನು ಹತ್ತಿರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಸಿಪಿಐ ಪಂಡಿತ ಸಗರ್ ಹಾಗೂ ಪಿ.ಎಸ್.ಐ ಮಡಿವಾಳಪ್ಪ ಬಾಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.