ಬೆದರಿಸಿ ಚಿನ್ನದ ಸರ ಕಳವು

ಬೆಂಗಳೂರು, ಜ.೪- ದ್ವಿಚಕ್ರ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ನಂದಿನಿಲೇಔಟ್ ಹಾಗೂ ಓಕಳಿಪುರಂನ ಕೆಳ ಸೇತುವೆ ಬಳಿ ಚಾಕು ತೋರಿಸಿ ಬೆದರಿಸಿ ಯುವಕರ ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ನಿನ್ನೆ ರಾತ್ರಿ ನಡೆದಿದೆ.
ಸರ ಕಸಿಯಲು ಪ್ರತಿ ರೋಧ ತೋರಿದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಕೈಗೆ ಇರಿದು ಬೆದರಿಸಿ ಕೃತ್ಯ ವೆಸಗಿ ಪರಾರಿಯಾಗಿದ್ದಾರೆ.
ಡಿಯೋ ಮತ್ತು ಆ?ಯಕ್ಟಿವಾ ದ್ವಿಚಕ್ರ ವಾಹನಗಳಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಂದಿನಿಲೇಔಟ್‌ನ ಎಸ್‌ಎಲ್‌ವಿ ಬಾರ್ ಆ?ಯಂಡ್ ರೆಸ್ಟೋರೆಂಟ್ ಬಳಿ ರಾತ್ರಿ ೧೧.೩೦ರ ಸುಮಾರಿನಲ್ಲಿ ಹರೀಶ್ ಬಾಬು ಎಂಬುವರಿಗೆ ಚಾಕು ತೋರಿಸಿ ಬೆದರಿಸಿ ೩೦ ಗ್ರಾಂ ಚಿನ್ನದ ಸರವನ್ನು ದರೋಡೆ ಮಾಡಿದ್ದಾರೆ.
ಬಳಿಕ ಇದೇ ಆರೋಪಿಗಳು ಓಕಳಿಪುರಂನ ಕೆಳ ಸೇತುವೆ ಬಳಿ ಬಂದಿದ್ದು, ಅಲ್ಲಿ ಇನೋವಾ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಇಬ್ಬರನ್ನು ಬೆದರಿಸಿ ೨೫ ಗ್ರಾಂ ಚಿನ್ನದ ಸರ ಕಸಿದು ಹೋಗಿದ್ದಾರೆ.
ಮೈಸೂರಿನವರಾದ ಪುನೀತ್ ಅವರು ತಮ್ಮ ಪತ್ನಿಯನ್ನು ಬಸವೇಶ್ವರನಗರದಲ್ಲಿರುವ ಆಕೆಯ ತವರು ಮನೆಗೆ ಬಿಟ್ಟು ತಮ್ಮೊಂದಿಗೆ ಬಂದಿದ್ದ ಸ್ನೇಹಿತ ಮನು ಎಂಬುವರನ್ನು ಮಹದೇವಪುರದಲ್ಲಿರುವ ಆತನ ಮನೆಗೆ ಇನೋವಾ ಕಾರಿನಲ್ಲಿ ಹೋಗುತ್ತಿದ್ದರು.
ಈ ನಡುವೆ ಓಕಳಿಪುರಂ ಕೆಳ ಸೇತುವೆ ಬಳಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಅಲ್ಲಿಗೆ ಆಕ್ಟಿವಾ ಹಾಗೂ ಡಿಯೋದಲ್ಲಿ ಬಂದ ಅಪರಿಚಿತರು ಪುನೀತ್‌ನನ್ನು ಹೆದರಿಸಿ ದರೋಡೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮನು ಆರೋಪಿಗಳನ್ನು ಪ್ರಶ್ನಿಸಿದ್ದಾರೆ.
ತಕ್ಷಣವೇ ಆರೋಪಿಗಳು ಚಾಕುವಿನಿಂದ ಮನುವಿನ ಮೇಲೆ ದಾಳಿ ಮಾಡಿದ್ದು, ಕೈಗೆ ಗಾಯವಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ನಂದಿನಿಲೇಔಟ್ ಹಾಗೂ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ದರೋಡೆಪ್ರಕರಣಗಳು ದಾಖಲಾಗಿವೆ.
ಎರಡೂ ಪ್ರಕರಣಗಳಲ್ಲೂ ಒಂದೇ ಗ್ಯಾಂಗ್ ಅಪರಾಧ ಎಸಗಿರುವುದು ಪತ್ತೆಯಾಗಿದ್ದು
ದುಷ್ಕರ್ಮಿಗಳ ಪತ್ತೆಗೆ ಉತ್ತರ ಹಾಗೂ ಪಶ್ಚಿಮ ವಿಭಾಗ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ.
ಕೃತ್ಯ ನಡೆದ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮಾರ ಪರಿಶೀಲನೆ ನಡೆಸಿ ಸರಕಳೆದುಕೊಂಡ ಯುವಕರಿಂದ ಮಾಹಿತಿ
ಪಡೆದು ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ ತೀವ್ರ ಶೋಧ ನಡೆಸಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.