ಎರಡನೇ ಹೆರಿಟೇಜ್ ವಾಕ್: ವಿವಿಧ ಐತಿಹಾಸಿಕ ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಭೇಟಿ

ವಿಜಯಪುರ, ಎ.5-‘ಹೆರಿಟೇಜ್ ವಾಕ್ ‘ಅಂಗವಾಗಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಇಂದು ನಗರದ ಐತಿಹಾಸಿಕ ಆದಿಲ್ ಶಾಹಿ ಕಾಲದ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಇಂದು ಎರಡನೆಯ ಬಾರಿಗೆ ಹೆರಿಟೇಜ್ ವಾಕ್ ನಡೆಸಿದ ಅವರು ಒಟ್ಟು ಏಳು ಐತಿಹಾಸಿಕ ಪಾರಂಪರಿಕ ಸ್ಮಾರಕಗಳಿಗೆ ಭೇಟಿ ನೀಡಿದರು.ನಗರದ ಸಾಟ್ ಖಬರ್, ಸುರಂಗ ಬೌಡಿ, ಜಿಲ್ಲಾ ಆಸ್ಪತ್ರೆ ಹತ್ತಿರದ ನಿತ್ಯ ನವ್ರಿ ಸ್ಮಾರಕ, ಚಾಂದ್ ಬೌಡಿ, ಇಬ್ರಾಹಿಂ ರೋಜಾ, ಮಲಿಕ್ ಮೈದಾನ್ ತೊಪ್, ಉಪರಿ ಬುರ್ಜಗಳ ವ್ಯಾಪ್ತಿಯಲ್ಲಿ ಅಲ್ಲಿ ಕಲ್ಪಿಸಿದ ಸೌಲಭ್ಯ ಹಾಗೂ ಅವಶ್ಯಕತೆ ಇರುವ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
ಮೊದಲು ಐತಿಹಾಸಿಕ ಪಾರಂಪರಿಕ ಸ್ಥಾನಗಳ ಪಟ್ಟಿಯಲ್ಲಿರುವ ಸಾಟ್ ಖಬರ್‍ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿಯ ನಿರ್ವಹಣೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮೂಲಭೂತ ಸೌಕರ್ಯವಿಲ್ಲದೆ ಇರುವುದನ್ನು ಗಮನಿಸಿ ಸರಿಯಾದ ರಸ್ತೆಯ ನಿರ್ಮಾಣ ಹಾಗೂ ಸೂಚನಾ ಫಲಕಗಳ ಅಳವಡಿಕೆ ಹಾಗೂ ಲೈಟಿಂಗ್ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಾಡಲು ತಿಳಿಸಿದರು. ಹಾಗೂ ಅಕ್ರಮವಾಗಿ ಭೂ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತದನಂತರ ಕರೇಜ್ ಭೂಗತ ಐತಿಹಾಸಿಕ ಜಲಮಾರ್ಗ ಮೂಲ ಸ್ಥಳ ವೀಕ್ಷಣೆ ಮಾಡಿ ಕರೇಜ್‍ವೆಂಟ್‍ಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸಿದರು. ಅದರಂತೆ ನೂತನ ಪ್ರವಾಸಿ ಮಂದಿರ ವ್ಯಾಪ್ತಿಯಲ್ಲಿನ ಕರೇಜ್ ವೆಂಟ್ ಅಭಿವೃಧ್ಧಿ ಬಗ್ಗೆ ಕ್ರಮ ಕೈಗೊಳ್ಳುವ ಚಿಂತನೆಯಿದೆ ಎಂದು ತಿಳಿಸಿದರು.
ನಂತರ ಜಿಲ್ಲಾಸ್ಪತ್ರೆಯ ಹತ್ತಿರವಿರುವ ನಿತ್ಯ ನವ್ರಿ ಸ್ಮಾರಕಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಲ್ಲಿ ಇರುವ ಬಾವಿಯ ನೀರನ್ನು ಸದ್ಬಳಕೆ ಮಾಡಲು ಜಿಲ್ಲಾ ಆಸ್ಪತ್ರೆಯ ಸರ್ಜನ್ ಅವರಿಗೆ ತಿಳಿಸಿದರು. ಮತ್ತು ಶುಚಿತ್ವ ಕಾಪಾಡಿಕೊಳ್ಳಲು ಸಲಹೆ ನೀಡಿದರು .
ತದನಂತರ ಇಬ್ರಾಹಿಂ ರೋಜಾ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿಯ ನಿರ್ವಹಣೆಯ ಮತ್ತು ಸಮಸ್ಯೆ ಬಗ್ಗೆ ತಿಳಿದುಕೊಂಡು ಉದ್ಯಾನವನ ನಿರ್ವಹಣೆಗೆ ಸಿಬ್ಬಂದಿಯ ಕೊರತೆಯನ್ನು ಮನಗಂಡು ಹೊರ ಗುತ್ತಿಗೆಯ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಲು ತಿಳಿಸಿದರು.
ಕೊನೆಯದಾಗಿ ಮಲಿಕ್ ಮೈದಾನ್ ತೊಪ್ ಮತ್ತು ಉಪರಿ ಬುರ್ಜ್‍ಗೆ ಭೇಟಿ ನೀಡಿ ವಿಜಯಪುರದ ವಿವ್ ಪಾಯಿಂಟ್ ಆದ ಉಪರಿ ಬುರ್ಜ್ ಇನ್ನು ಹೆಚ್ಚು ಅಭಿವೃದ್ಧಿಪಡಿಸಿ ಜನರನ್ನು ಆಕರ್ಷಿಸಲು ಕ್ರಮಕೈಗೊಳ್ಳಲು ಸಲಹೆ ನೀಡಿದರು.ಈ ಎಲ್ಲ ಸ್ಮಾರಕಗಳನ್ನು ವೀಕ್ಷಿಸಿದ್ದು ಇವುಗಳ ನಿರ್ವಹಣೆ ಹಾಗೂ ಇತರೆ ಅಭಿವೃದ್ಧಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಆಯುಕ್ತ ಹರ್ಷ ಶೆಟ್ಟಿ. ಉಪವಿಭಾಗಾಧಿಕಾರಿ, ಬಲರಾಮ್ ಲಮಾಣಿ, ನಗರಾಭಿವೃಧ್ಧಿಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಮೆಕ್ಕಳಕಿ,ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿ ಪೀಟರ್ ಅಲೆಕ್ಸಾಂಡರ್. ಅಮೀನ್ ಹುಲ್ಲೂರ್. ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.