ಎರಡನೇ ಹಂತದ ಚುನಾವಣೆ; ೩೫ ಗ್ರಾ.ಪಂಗೆ ಚುನಾವಣೆ

ಹರಪನಹಳ್ಳಿ.ಡಿ.೨೭: ಇಂದು ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಲಿದ್ದು, ಈಗಾಗಲೇ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಮತಗಟ್ಟೆ ಸಿಬ್ಬಂದಿ ಚುನಾವಣೆ ಪರಿಕರಗಳನ್ನು ಜೋಡಿಸಿಕೊಂಡು, ತಮಗೆ ನಿಯೋಜನೆ ಮಾಡಲಾಗಿರುವ ಹಳ್ಳಿಗಳ ಮತಗಟ್ಟೆಗಳಿಗೆ ತೆರಳಿದರು. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ತಾಲ್ಲೂಕಿನಲ್ಲಿ ಒಟ್ಟು 37 ಗ್ರಾಮ ಪಂಚಾಯ್ತಿಗಳ ಪೈಕಿ ಅಧಿಕಾರವಾದಿ ಪೂರ್ಣಗೊಳ್ಳದ ಕಂಚಿಕೇರಿ, ಹಾರಕನಾಳು ಗ್ರಾ.ಪಂ ಹೊರತುಪಡಿಸಿ 35 ಗ್ರಾ.ಪಂಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ 7 ಗ್ರಾ.ಪಂಗಳು ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ. 97274 ಪುರುಷ, 93276 ಮಹಿಳೆಯರು, 4 ಇತರೆ ಸೇರಿ ಒಟ್ಟು 1,90,554 ಮತದಾರರಿದ್ದಾರೆ. 256 ಮೂಲ ಮತಗಟ್ಟೆಗಳು ಹಾಗೂ ಹೆಚ್ಚುವರಿ 45 ಸೇರಿ ಒಟ್ಟು 298 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1120 ಸಿಬ್ಬಂದಿ ಚುನಾವಣೆಗೆ ನಿಯೋಜನೆ ಮಾಡಲಾಗಿದೆ. ತಾಲ್ಲೂಕಿನ ಒಟ್ಟು 608 ಸ್ಥಾನಗಳ ಪೈಕಿ ಈಗಾಗಲೇ ಒಟ್ಟು 49 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 559 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1369 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ತಲಾ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಜತೆಗೆ ಓರ್ವ ಡಿವೈಎಸ್ಪಿ, ಐವರು ಸಿಪಿಐ, 10 ಪಿಎಸ್‌ಐ, 27 ಎಎಸ್‌ಐ, 75 ಮುಖ್ಯ ಪೇದೆ, 200 ಪೊಲೀಸ್, 115-ಗೃಹ ರಕ್ಷಕ ದಳ ಸಿಬ್ಬಂದಿ ಸೇರಿ ಒಟ್ಟು 433 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಉಪವಿಭಾಗಾದಿಕಾರಿ ವಿ.ಕೆ.ಪ್ರಸನ್ನಕುಮಾರ್, ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಂಡರು. ಚುನಾವಣಾ ಆಯೋಗದ ವೀಕ್ಷಕ ಆಗಮಿಸಿ ಪರಿಶೀಲನೆ ನಡೆಸಿದರು.