ಎರಡನೇ ಬಾರಿಗೆ ಶಾಸಕ ಮತ್ತಿಮೂಡರಿಗೆ ಕೋವಿಡ್ ಸೋಂಕು

ಕಲಬುರಗಿ.ಏ.23:ಗ್ರಾಮೀಣ ವಿಧಾನಸಭಾ ಕ್ಷೇತ್ರದ (ಮೀಸಲು) ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಅವರಿಗೆ ಕೋವಿಡ್ ಎರಡನೇ ಅಲೆಯ ಸೋಂಕು ಬಾಧಿಸಿದೆ. ಕಳೆದ ಗುರುವಾರದಂದೇ ಶಾಸಕರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಉಪಚಾರ ಪಡೆಯುತ್ತಿದ್ದಾರೆ.
ಈ ಕುರಿತು ಸ್ವತ: ಶಾಸಕರೇ ಬಹಿರಂಗಪಡಿಸಿದ್ದು, ತಮ್ಮ ಸಂಪರ್ಕಿತರು ಸಹ ಕೂಡಲೇ ತಪಾಸಣೆಗೆ ಒಳಪಡಬೇಕು ಎಂದು ಕೋರಿದ್ದಾರೆ. ಈ ಹಿಂದೆಯೂ ಸಹ ಶಾಸಕ ಬಸವರಾಜ್ ಮತ್ತಿಮೂಡ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಉಪಚಾರಪಡೆದು ಗುಣಮುಖರಾಗಿ ಕೋವಿಡ್ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಕೋವಿಡ್ ಎರಡನೇ ಅಲೆಯ ಪರಿಹಾರ ಕಾರ್ಯಗಳಲ್ಲಿ ತೊಡಗುತ್ತಿರುವ ಸಂದರ್ಭದಲ್ಲಿಯೇ ಶಾಸಕರು ಮತ್ತೆ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಗ್ರಾಮೀಣ ಮತಕ್ಷೇತ್ರದಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಗುರುವಾರವಷ್ಟೇ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣದ ಕುರಿತಾದ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಮುಂತಾದವರೂ ಸಹ ಇದ್ದರು. ಹೀಗಾಗಿ ಅವರ ಸಂಪರ್ಕಿತರೂ ಸಹ ಮತ್ತೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.