ಎರಡನೇ ದಿನದ ವೀಕೆಂಡ್ ಕರ್ಫ್ಯೂ : ಜನರಿಲ್ಲದೇ ಬಿಕೋ ಎಂದ ನಗರದ ರಸ್ತೆ – ವ್ಯಾಪಾರ ಕೇಂದ್ರ

ಬಹುತೇಕ ಕಡೆ ಶಾಶ್ವತ ಬ್ಯಾರಿಕೇಡ್ : ಪೊಲೀಸರ ಸರ್ಪಗಾವಲು, ರವಿವಾರ – ಮಹತ್ವದ ನಿರ್ಧಾರ
ರಾಯಚೂರು.ಏ.೨೫- ಕೊರೊನಾ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಇಂದು ಕಟ್ಟುನಿಟ್ಟಾಗಿ ಅನುಸರಿಸಲಾಯಿತು. ನಗರದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದರೇ, ಪೊಲೀಸರು ಮಾತ್ರ ಸುಡು ಬಿಸಿಲಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂದಿತು.
ನಗರದ ಬಹುತೇಕ ಕಡೆ ಕಳೆದ ವರ್ಷ ಮಾರ್ಚ್ ಲಾಕ್ ಡೌನ್ ಮಾದರಿಯಲ್ಲಿ ಶಾಶ್ವತ ಬ್ಯಾರಿಕೇಡ್ ಹಾಕಿರುವುದು ಈ ಕರ್ಫ್ಯೂ ಮುಂದುವರೆಯುವ ಸಾಧ್ಯತೆಗಳ ಬಗ್ಗೆ ಮುನ್ಸೂಚನೆಯೇ?. ನಾಳೆ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ. ಒಂದು ವಾರದವರೆಗೂ ಲಾಕ್ ಡೌನ್ ಜಾರಿಗೆ ತಜ್ಞರ ಸಲಹೆ ಹಿನ್ನೆಲೆಯಲ್ಲಿ ಮತ್ತು ತೀವ್ರ ಒತ್ತಡದ ಕಾರಣಕ್ಕೆ ರಾಜ್ಯ ಸರ್ಕಾರ ನಾಳೆ ಯಾವ ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಆದರೆ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ತೀನ್ ಖಂದೀಲ್, ಗಾಂಧಿ ವೃತ್ತ, ಚಂದ್ರಮೌಳೇಶ್ವರ ವೃತ್ತದ ಬಳಿ ಕಳೆದ ವರ್ಷದ ಮಾದರಿಯಲ್ಲಿ ಲಾಕ್ ಡೌನ್‌ಗೆ ಬೇಕಾದ ಶಾಶ್ವತ ಬ್ಯಾರಿಕೇಡ್ ವ್ಯವಸ್ಥೆ ಮಾಡಿರುವುದು ಗಮನಾರ್ಹವಾಗಿದೆ.
ನಿನ್ನೆ ಶನಿವಾರ ವೀಕೆಂಡ್ ಕರ್ಫ್ಯೂ ಇದ್ದರೂ, ಅಲ್ಲಲ್ಲಿ ಜನ ಓಡಾಡುತ್ತಿದ್ದರು. ಪೊಲೀಸರು ಅನಗತ್ಯ ಓಡಾಡುವವರಿಗೆ ದಂಡ ವಿಧಿಸಿದೆ. ಇದರಿಂದ ೧.೨೦ ಲಕ್ಷ ದಂಡ ವಸೂಲಾಗಿದೆ. ೧೦೦ ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮಾಸ್ಕ್ ಧರಿಸದ ಪ್ರಕರಣದಲ್ಲಿ ೬೦೦ ಜನರಿಗೆ ದಂಡ ವಿಧಿಸಲಾಗಿದೆ. ಒಟ್ಟಾರೆಯಾಗಿ ಕೊರೊನಾ ತೀವ್ರತೆ ತಡೆಯುವಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಭಾರೀ ಸಂಘರ್ಷ ನಡೆಸಿದೆ. ದಿನೇ ದಿನೇ ಪ್ರಕರಣಗಳ ಹೆಚ್ಚಳದಿಂದ ಲಾಕ್ ಡೌನ್ ಒಂದೇ ಈಗ ಕೊರೊನಾ ನಿಯಂತ್ರಣಕ್ಕೆ ಪರ್ಯಾಯ ಮಾರ್ಗ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾವೀರ ಜಯಂತಿ ಇದ್ದರೂ, ಇನ್ನೂ ಕೆಲವೆಡೆ ಮಾಂಸ ಮಾರಾಟ ನಡೆಯಿತು. ಅಲ್ಲದೇ, ಅಗತ್ಯ ವಸ್ತುಗಳ ಖರೀದಿ ವ್ಯವಹಾರಕ್ಕೆ ಮುಂಜಾನೆ ೧೦ ಗಂಟೆವರೆಗೂ ಅವಕಾಶ ನೀಡಲಾಗಿತ್ತು. ಆದರೆ, ವೀಕೆಂಡ್ ಕರ್ಫ್ಯೂ ಮತ್ತು ರವಿವಾರದ ಹಿನ್ನೆಲೆಯಲ್ಲಿ ಜನರ ಓಡಾಟ ಬಹುತೇಕ ವಿರಳವಾಗಿತ್ತು. ನಿನ್ನೆ ಪೊಲೀಸರು ತೀವ್ರ ಕಾರ್ಯಾಚರಣೆ, ಲಾಠಿ ರುಚಿ ಹಾಗೂ ದಂಡದಿಂದಾಗಿ ಜನ ಇಂದು ಹೊರಗೆ ಬರಲು ಯೋಚಿಸುವಂತಿತ್ತು. ಎಲ್ಲೆಡೆ ಪೊಲೀಸರ ಸರ್ಪಗಾವಲು ಹಿನ್ನೆಲೆಯಲ್ಲಿ ಜನರು ಅಲ್ಲಿ, ಇಲ್ಲಿ ಸಂದಿಗಂಧಿಗಳಲ್ಲಿ ಓಡಾಡುವರೇ ವಿನಃ, ಮುಖ್ಯ ರಸ್ತೆಗಳಲ್ಲಿ ಕಾಣಲಿಲ್ಲ.
ಎರಡು ದಿನಗಳ ಈ ಲಾಕ್ ಡೌನ್ ನಾಳೆಯೂ ಮುಂದುವರೆಯಲಿದೆ ಎನ್ನುವುದು ಈಗ ಜನರಲ್ಲಿ ಕುತೂಹಲಕ್ಕೆ ದಾರಿ ಮಾಡಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುವುದರಿಂದ ಜನರ ನಿತ್ಯದ ಊಟದ ವ್ಯವಸ್ಥೆಗೆ ಯಾವುದೇ ಸಮಸ್ಯೆಯಾಗಲಿಲ್ಲ. ಲಾಕ್ ಡೌನ್‌ನಿಂದ ಬೀದಿ ಬದಿಯಲ್ಲಿರುವ ಜನರಿಗೆ ಊಟಕ್ಕೆ ತೊಂದರೆಯಾಗಿದೆ. ಅಲ್ಲಲ್ಲಿ ಕೆಲವರು ನೆರವಾಗುವ ಮೂಲಕ ಮಾನವಿಯತೆ ಮೆರೆದಿದ್ದಾರೆ. ಕಳೆದ ಒಂದು ವರ್ಷದ ಹಿಂದಿನ ಲಾಕ್ ಡೌನ್ ಜನ ಈಗ ಮತ್ತೇ ನೆನಪು ಮಾಡಿಕೊಳುವಂತೆ ಮಾಡಿದೆ.
ಸುಮಾರು ೫೦ ದಿನಗಳ ಕಾಲ ಲಾಕ್ ಡೌನ್‌ನಲ್ಲಿ ಜೀವನ ಕಳೆದ ನಂತರ ಕೊರೊನಾ ಸಂಪೂರ್ಣವಾಗಿ ನಿರ್ಮೂಲನೆಗೊಂಡಿತು ಎಂದು ವಿಶ್ವಾಸದಲ್ಲಿದ್ದವರು. ಈಗ ಎರಡನೇ ಅಲೆಯ ಬಹತ್ತಾಕಾರದ ಹೊಡೆತಕ್ಕೆ ಸಿಕ್ಕು ಜೀವ ರಕ್ಷಣೆಗೆ ಪರದಾಡುವಂತೆ ಮಾಡಿದೆ. ಪೊಲೀಸ್ ಇಲಾಖೆ ಜೀವದ ಅಂಗು ತೊರೆದು ಭಾರೀ ಕೊರೊನಾ ಅಪಾಯದ ಮಧ್ಯೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರು ಸಹ ತಮ್ಮ ತಮ್ಮ ಮನೆಗಳಲ್ಲಿ ಉಳಿಯುವ ಮೂಲಕ ಮಾರಣಾಂತಿಕವಾಗಿರುವ ಈ ಕೊರೊನಾ ನಿರ್ಮೂಲನೆಗೆ ಸಹಕರಿಸಲು ಅಗತ್ಯವಿದೆ.
ಕೊರೊನಾ ತೀವ್ರತೆ ಕಡಿಮೆಯಾಗುವವರೆಗೂ ಅನಗತ್ಯ ಓಡಾಟ ಸ್ಥಗಿತಗೊಳಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಎಲ್ಲರೂ ಕೈಜೋಡಿಸಿದರೇ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದರೇ, ಕೊರೊನಾ ಮಹಾಮಾರಿಯನ್ನು ನಿರ್ಮೂಲನೆ ಮಾಡಬಹುದಾಗಿದೆ.