ಎರಡನೇ ದಿನಕ್ಕೆ ಮುಷ್ಕರ: ಪ್ರಯಾಣಿಕರ ಪರದಾಟ

ಹುಬ್ಬಳ್ಳಿ, ಏ 8: ಬೇಡಿಕೆ ಈಡೇರಿಕೆಗೆ ರಾಜ್ಯ ಸಾರಿಗೆ ಸಂಸ್ಥೆ ನೌಕರರು ರಾಜ್ಯಾದ್ಯಂತ ನಿನ್ನೆಯಿಂದ ಅನಿರ್ದಿಷ್ಟ ಮುಷ್ಕರವನ್ನು ಹಮ್ಮಿಕೊಂಡಿದ್ದು, ಇಂದು ಎರಡನೇ ದಿನವೂ ಮುಷ್ಕರ ಮುಂದುವರೆದಿದ್ದು, ಪ್ರಯಾಣಿಕರು ಪರದಾಡುವಂತಾಯಿತು.
ಬೇಡಿಕೆ ಈಡೇರುವವರೆಗೂ ನಾವು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಸಾರಿಗೆ ಸಂಸ್ಥೆಯ ನೌಕರರು ಪಟ್ಟು ಹಿಡಿದಿದ್ದು, ಮುಷ್ಕರವನ್ನು ಹಿಂಪಡೆಯುವಂತೆ ಸರ್ಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರೂ, ನೌಕರರು ಇದಕ್ಕೆ ಸ್ಪಂದಿಸುತ್ತಿಲ್ಲ.
ನಗರದ ಹಳೇ ಬಸ್ ನಿಲ್ದಾಣದಿಂದ ಪ್ರತಿದಿನ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿದ್ದ ಬಸ್‍ಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರ ಅನುಕೂಲಕ್ಕೆ ಖಾಸಗಿ ಬಸ್ ಹಾಗೂ ವಾಹನಗಳು ಬಸ್‍ನಿಲ್ದಾಣದಲ್ಲಿ ಬೀಡು ಬಿಟ್ಟಿವೆ.
ಪ್ರಯಾಣಿಕರು ಖಾಸಗಿ ವಾಹನಗಳಲ್ಲಿಯೇ ಪ್ರಯಾಣಿಸುತ್ತಿದ್ದು, ಗದಗ, ಹಾವೇರಿ, ಬಾಗಲಕೋಟ, ಬೆಳಗಾವಿ ಹೀಗೆ ಬೇರೆ ಬೇರೆ ಊರುಗಳಿಗೆ ಖಾಸಗಿ ಬಸ್‍ನಲ್ಲಿಯೇ ಪ್ರಯಾಣ ಕೈಗೊಂಡಿದ್ದಾರೆ. ಆದರೆ ಕೆಲ ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಬಸ್ ಅವ್ಯವಸ್ಥೆಯಿಂದಾಗಿ ಕಂಗಾಲಾಗಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಜನರು ದುಡಿಮೆಗಾಗಿ ಆಗಮಿಸುತ್ತಾರೆ. ಆದರೆ ಬಸ್ ಸ್ಥಗಿತದಿಂದಾಗಿ ಜನತೆ ಹೈರಾಣಾಗಿದೆ. ಹೊಟ್ಟೆಪಾಡಿಗಾಗಿ ಪ್ರತಿದಿನ ಸಾವಿರಾರು ಕೂಲಿಕಾರರು, ಕಾರ್ಮಿಕರು, ಚಿಕ್ಕ ವ್ಯಾಪಾರಸ್ಥರು ಹಳ್ಳಿಗಳಿಂದ ಆಗಮಿಸುವವರಿಗೆ ಭಾರೀ ಪೆಟ್ಟು ಬಿದ್ದಂತಾಗಿದೆ.