ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಪ್ರಯಾಣಿಕರ ಪರದಾಟ

ಮೈಸೂರು: ಏ.08: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಖಾಸಗಿ ಬಸ್‍ಗಳ ಲಾಭದ ಉದ್ದೇಶಕ್ಕೆ ಪ್ರಯಾಣಿಕರು ಹೈರಾಣಾಗಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ಪರ್ಯಾಯವಾಗಿ ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಿದೆ. ಆದರೆ ಖಾಸಗಿ ಬಸ್ ಗಳ ಲಾಭದ ಧೋರಣೆಗೆ
ಹೆಚ್ಚು ಜನರಿದ್ರೆ ಹೆಚ್ಚು ಬಸ್, ಕಡಿಮೆ ಜನ ಇದ್ರೆ ಬಸ್ಸೆ ಇಲ್ಲ. ಎಂಬ ನಿಯಮವನ್ನು ಖಾಸಗಿ ಬಸ್ ಗಳು ಅನುಸರಿಸುತ್ತಿದ್ದು ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಒಬ್ಬರು, ಇಬ್ಬರು, ನಾಲ್ಕು ಜನರಿದ್ದರೆ ಆ ಮಾರ್ಗಗಳಿಗೆ ಬಸ್ಸೆ ಇಲ್ಲ. ಅತಿ ಹೆಚ್ಚು ಜನ ಓಡಾಡುವ ಮಾರ್ಗಗಳಿಗೆ ಗಂಟೆಗೊಂದು ಬಸ್ ಬಿಡಲಾಗುತ್ತಿದೆ. ಮಾರ್ಗ ಯಾವುದಾದರೂ ಇರಲಿ ಜನ ಮಾತ್ರ ಹೆಚ್ಚು ಇರಬೇಕು. ಇಲ್ಲವಾದ್ರೆ ಆ ಮಾರ್ಗಕ್ಕೆ ಬಸ್ಸನ್ನೆ ಓಡೊಸೋಲ್ಲ. ಇಲ್ಲಿ ಯಾವುದೇ ಅಧಿಕಾರಿಗಳ ನಿಯಂತ್ರಣ ಇಲ್ಲ. ಈ ಮೂಲಕ ಖಾಸಗಿ ಬಸ್ ಚಾಲಕ, ಮಾಲೀಕರು ದರ್ಬಾರ್ ನಡೆಸುತ್ತಿದ್ದು, ಇದರಿಂದಾಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾದು ಕಾದು ಸುಸ್ತಾದ ಪರಿಸ್ಥಿತಿ ಕಂಡು ಬಂದಿದೆ.
ಖಾಸಗಿ ಬಸ್ ಗಳ ಧೋರಣೆಯಿಂದ ಕಂಗಾಲಾಗಿರುವ ಪ್ರಯಾಣಿಕರು ಖಾಸಗಿ ಬಸ್ ಗಿಂತ ಸರ್ಕಾರಿ ಬಸ್ ಗಳೇ ವಾಸಿ ಎನ್ನುತ್ತಿದ್ದಾರೆ.
ಮೈಸೂರು ಗ್ರಾಮಾಂತರ ಹಾಗೂ ನಗರ ಭಾಗದ ಸಾರಿಗೆ ಬಸ್ ಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ನಗರ ಭಾಗದ 370, ಗ್ರಾಮಾಂತರ ಭಾಗದ 635 ಬಸ್ ಗಳ ಸೇವೆ ಸ್ಥಗಿತಗೊಂಡಿದೆ. ಒಟ್ಟು 5000 ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಮೈಸೂರು ಜಿಲ್ಲೆಯ 7 ಡಿಪೆÇೀಗಳಲ್ಲಿ ಬಸ್ ಗಳು ಖಾಲಿಯಾಗಿ ನಿಂತಿವೆ.
ಒಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ಸಂಸ್ಥೆ ನೌಕರರ ಹಗ್ಗಜಗ್ಗಾಟದಿಂದ ಪ್ರಯಾಣಿಕರು ಇನ್ನಿಲ್ಲದ ಪಾಡು ಪಡುವಂತಾಗಿದೆ. ಕೊರೋನಾ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಜನಸಾಮಾನ್ಯರು ಸಾರಿಗೆ ಬಸ್ ಮುಷ್ಕರದಿಂದ ಹಿಡಿಶಾಪ ಹಾಕುತ್ತಿದ್ದಾರೆ.