ಎರಡನೇ ಅಲೆ ತಡೆಗೆ ಎಚ್ಚರಿಕೆ ಅಗತ್ಯ

ಗೌರಿಬಿದನೂರು, ಏ ೨೯- ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಸಿದ್ಧರಾಗಬೇಕಾಗಿದೆ ಎಂದು ತಾ.ಪಂ ಇಒ ಎನ್.ಮುನಿರಾಜು ತಿಳಿಸಿದರು.
ತಾಲ್ಲೂಕಿನ ಗಂಗಸಂದ್ರ ಗ್ರಾ.ಪಂ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಎಲ್ಲೆಡೆ ಎರಡನೇ ಅಲೆಯ ಸೋಂಕಿನ ತೀವ್ರತೆ ಹೆಚ್ಚಾಗಿದ್ದು ಜನತೆ ಭಯಭೀತಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಜನರಿಗೆ ಜಾಗೃತಿ ವಹಿಸುವಂತೆ ತಿಳಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ. ಜತೆಗೆ ೪೫ ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯುವಂತೆ ತಿಳಿಸಬೇಕಾಗಿದೆ. ಈ ತುರ್ತು ಸಂದರ್ಭದಲ್ಲಿ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಗ್ರಾ.ಪಂ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಹೇಳಿದರು.
ಗ್ರಾ.ಪಂ ಪಿಡಿಒ ಎಲ್.ರೂಪ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಜನತೆಗೆ ಕೋವಿಡ್ ಎರಡನೇ ಅಲೆಯ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗಿದೆ. ಜತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರತೀ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ನಾಗರೀಕರಲ್ಲಿ ಮನವರಿಕೆ ಮಾಡಲಾಗಿದೆ. ಗ್ರಾ.ಪಂ ಸಿಬ್ಬಂಧಿಗಳ ಸಹಕಾರದಿಂದ ಗ್ರಾಮಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳಾದ ಮಂಜುಳಾ, ಅನಿಲ್ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಟಾಸ್ಕ್ ಫೋರ್ಸ್ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.