ಎರಡಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣ ಇದ್ದರೆ ಅದು ಕ್ಷಯಮುಕ್ತ ಗ್ರಾಮ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜು 19. ಒಂದು ಗ್ರಾಮದಲ್ಲಿ 1000 ಜನಸಂಖ್ಯೆ ಇದ್ದು, ಅದರಲ್ಲಿ 50ಜನರಿಗೆ ಕಫ ಪರೀಕ್ಷೆ ಮಾಡಿದಾಗ 2ಕ್ಕಿಂತ ಕಡಿಮೆ ಕ್ಷಯರೋಗ ಪ್ರಕರಣ ಕಂಡಬಂದರೆ ಆ ಗ್ರಾಮವು ಕ್ಷಯಮುಕ್ತವಾಗುತ್ತಿರುವ ಗ್ರಾಮವಾಗಿರುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ತಿಳಿಸಿದರು. ಜು.18ರಂದು ಬಳ್ಳಾರಿ ತಾಲೂಕು ಹಳೆ ಮೋಕ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದಲ್ಲಿ ಕ್ಷಯರೋಗ ಹರಡುವ ಕುರಿತು, ಲಕ್ಷಣಗಳ ಕುರಿತು ಮತನಾಡಿ ಕ್ಷಯರೋಗ ಪತ್ತೆಯಾದ ತಕ್ಷಣವೇ ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಯವರ ಸಲಹೆಯಂತೆ ಕ್ರಮವಾಗಿ ಔಷಧಿ ಪಡೆದು ಈ ರೋಗದಿಂದ ಮುಕ್ತರಾಗಬಹುದೆಂದು ತಿಳಿಸಿದರು.
ಇದೇವೇಳೆ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಭಾರತಿ ರವರು ಪ್ರಾಸ್ತಾವಿಕ ಮಾತನಾಡಿ ಕ್ಷಯರೋಗದ ಲಕ್ಷಣಗಳು, ತೊಂದರೆ ಇರುವಲ್ಲಿ ಗುರುತಿಸಿ ಸಮೀಕ್ಷೆ ನಡೆಸಲಾಗುವುದು, ಆರೋಗ್ಯ ನಿರೀಕ್ಷಣಾಧಿಕಾರಿ, ಸುರಕ್ಷಾಧಿಕಾರಿ, ಆಶಾಕಾರ್ಯಕರ್ತರು ಈ ಕಾರ್ಯ ನಡೆಸುತ್ತಾರೆ. ಆರೋಗ್ಯ ಅಧಿಕಾರಿಗಳು ರಕ್ತಹೀನತೆ, ಅಧಿಕ ರಕ್ತದೊತ್ತಡ, ಮಧುಮೇಹ ಇರುವವರಿಗೆ ಟಿಬಿ ಸ್ಕ್ರೀನಿಂಗ್ ಮಾಡುವ ಮೂಲಕ ರೋಗವನ್ನು ಪತ್ತೆಹಚ್ಚಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡುತ್ತಾರೆಂದು ತಿಳಿಸಿದರಲ್ಲದೇ ಈ ಕಾರ್ಯಕ್ಕೆ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಸಹಕಾರ ನೀಡಬೇಕೆಂದು ಕೋರಿದರು. ನಂತರ ಗ್ರಾ.ಪಂ.ಅಧ್ಯಕ್ಷ ಡಿ.ರಾಮಣ್ಣ ಮಾತನಾಡಿ ಆರೋಗ್ಯ ಕಾಪಾಡುವ ಯಾವುದೇ ಕಾರ್ಯಕ್ರಮಗಳಿಗೆ ಸ್ಪಂಧಿಸಿ ಸಹಕಾರ ನೀಡಲಾಗುವುದೆಂದು ತಿಳಿಸಿದರು. ಸ್ಥಳೀಯ ಗ್ರಾ.ಪಂ.ಉಪಾಧ್ಯಕ್ಷರು, ಸದಸ್ಯರು, ಬಿಲ್‍ಕಲೆಕ್ಟರ್ ರಾಜಣ್ಣ, ಆರೋಗ್ಯ ಇಲಾಖೆಯ ಬಾಬುಲಾರೆಡ್ಡಿ, ಬಸವರಾಜ್, ಗ್ರಾಮದ ಮುಖಂಡರು, ಆರೋಗ್ಯ ಸಿಬ್ಬಂದಿಗಳಾದ ನಂದಿನಿ, ಮೊಹಮ್ಮದ್‍ಇಶಾಕ್, ಗುರುಸಿದ್ದಪ್ಪ, ಆಶಾ ಸುಗುಮಕಾರ ಪಾವನಿ, ಆಶಾಕಾರ್ಯಕರ್ತರು ಪಾಲ್ಗೊಂಡಿದ್ದರು. ಮೋಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖರ್ಶಿದ್‍ಬೇಗಮ್ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.