ಎಮ್ಮಿಗನೂರಿನ ಕೋವಿಡ್ ಆರೈಕೆ ಕೇಂದ್ರಕ್ಕೆ 101000 ರೂ.ಗಳ ದೇಣಿಗೆ

ಎಮ್ಮಿಗನೂರು, ಜೂ.03: ಎಮ್ಮಿಗನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಶಾಸಕ ಜೆ.ಎನ್.ಗಣೇಶ್ ಗುರುವಾರ ಭೇಟಿ ನೀಡಿ, ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಜತೆಗೆ ಆರೋಗ್ಯ ಕೇಂದ್ರಕ್ಕೆ 101000 ರೂ.ಗಳ ದೇಣಿಗೆ ನೀಡಿದರು.
ನಂತರ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ರಾಜ್ಯ ಸರ್ಕಾರ ಶಾಸಕರ ಅನುದಾನದಲ್ಲಿ 50 ಲಕ್ಷ ಬಿಡುಗಡೆಗೊಳಿಸಿದೆ. ಇದರಲ್ಲಿ ಅಂದಾಜು 16 ಲಕ್ಷ ವೆಚ್ಚದ ಆಕ್ಸಿಜನ್ ಆಂಬುಲೆನ್ಸ್ ಅನ್ನು ಎಮ್ಮಿಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗುವುದು. ರಾಜ್ಯದಲ್ಲಿ ಒಳ್ಳೆಯ ಆರೋಗ್ಯ ಕೇಂದ್ರವಾಗಿದೆ. ಇಲ್ಲಿನ ಜನರ ಸಹಕಾರದೊಂದಿಗೆ ಜನರನ್ನು ಕೋವಿಡ್ ಮುಕ್ತಕ್ಕೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಕೋವಿಡ್ನಿಂದ 37 ಜನ ಗುಣಮುಖರಾಗಿದ್ದಾರೆ. ಕೊರೋನಾದಿಂದ ದೂರ ಮಾಡುವ ನಿಟ್ಟಿನಲ್ಲಿ ಇಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ ಒಂದು ಲಕ್ಷದ ಒಂದು ಸಾವಿರ ದೇಣಿಗೆ ನೀಡಲಾಯಿತು. ಜನರು ಕೋವಿಡ್ ನಿಯಮಗಳ ಪರಿಪಾಲನೆಯೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಮುಖಂಡರಾದ ಕರಿಬಸವನಗೌಡ, ಕೇಶವರೆಡ್ಡಿ, ರಾಮನಾಯ್ಡು, ಸದಾಶಿವಪ್ಪ, ಮುಖಂಡರು ಪಾಲ್ಗೊಂಡಿದ್ದರು.