ಎಮ್ಮಾ ಮುಕುಟಕ್ಕೆ ಯುಎಸ್ ಓಪನ್ ಗರಿ

ನ್ಯೂಯಾರ್ಕ್, ಸೆ.೧೨- ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದಿದ್ದ ಶ್ರೇಯಾಂಕ ರಹಿತ ಆಟಗಾರ್ತಿ ಬ್ರಿಟನ್‌ನ ೧೮ ವರ್ಷದ ಎಮ್ಮಾ ರಡುಕಾನು ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಎಮ್ಮಾ ವೃತ್ತಿಪರ ಟೆನಿಸ್‌ನಲ್ಲಿ ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದು ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫ್ಲಶಿಂಗ್ ಮೆಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಕೆನಡಾದ ಹದಿಹರೆಯದ ಆಟಗಾರ್ತಿ ಲೇಲಹ್ ಫೆರ್ನಾಂಡಿಸ್ ವಿರುದ್ಧ ೬-೪, ೬-೩ ನೇರ ಸೆಟ್‌ಗಳ ಜಯ ಸಾಧಿಸುವ ಮೂಲಕ ಎಮ್ಮಾ ಪ್ರಶಸ್ತಿ ಗೆದ್ದುಕೊಂಡರು. ವಿಶ್ವ ರ್ಯಾಂಕಿಂಗ್‌ನಲ್ಲಿ ೧೫೦ನೇ ಸ್ಥಾನದಲ್ಲಿರುವ ಎಮ್ಮಾ ನ್ಯೂಯಾರ್ಕ್ ಓಪನ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡಿದ ಆರು ಹಾಗೂ ಮುಖ್ಯ ಡ್ರಾದಲ್ಲಿ ಆಡಿದ ೧೪ ಹೀಗೆ ಎಲ್ಲ ೨೦ ಸೆಟ್‌ಗಳನ್ನೂ ಗೆಲ್ಲುವ ಮೂಲಕ ಚಾಂಪಿಯನ್‌ಶಿಪ್ ಗೆದ್ದ ಕೀರ್ತಿಗೆ ಪಾತ್ರರಾದರು.
೨೦೧೪ರಲ್ಲಿ ಸೆರೇನಾ ವಿಲಿಯಮ್ಸ್ ಮಾತ್ರ ಈ ಸಾಧನೆ ಮಾಡಿದ್ದರು. ಹದಿನೇಳು ವರ್ಷದವರಾಗಿದ್ದ ಸೆರೇನಾ ವಿಲಿಯಮ್ಸ್ ೧೯೯೯ರ ಯುಎಸ್ ಓಪನ್‌ನಲ್ಲಿ ೧೮ ವರ್ಷದ ಮಾರ್ಟಿನಾ ಹಿಂಗಿಸ್ ಅವರನ್ನು ಫೈನಲ್‌ನಲ್ಲಿ ಸೋಲಿಸಿದ ಬಳಿಕ ಇಬ್ಬರು ಶ್ರೇಯಾಂಕ ರಹಿತ ಹದಿಹರೆಯದ ಆಟಗಾರ್ತಿಯರು ಫೈನಲ್ ತಲುಪಿದ್ದರು.
ಎರಡನೇ ಸೆಟ್‌ನಲ್ಲಿ ಎದುರಾಳಿಯ ಸರ್ವೀಸ್ ಬ್ರೇಕ್ ಮಾಡುವ ಮೂಲಕ ೪-೨ ಮುನ್ನಡೆ ಸಾಧಿಸಿದ ಎಮ್ಮಾ, ತಮ್ಮ ಪಾಯಿಂಟ್ ಉಳಿಸಿಕೊಂಡು ಮುನ್ನಡೆಯನ್ನು ೫-೨ಕ್ಕೆ ಹಿಗ್ಗಿಸಿಕೊಂಡರು. ಬಳಿಕ ಮತ್ತೊಮ್ಮೆ ಬ್ರೇಕ್‌ಪಾಯಿಂಟ್ ಮೂಲಕ ಪ್ರಶಸ್ತಿ ಗೆದ್ದರು.