ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಗಲಾಟೆ ಜೆಸಿನಗರ ಠಾಣೆ ಪಿಎಸ್‌ಐ ಪೇದೆ ಸಸ್ಪೆಂಡ್

ಬೆಂಗಳೂರು,ಜು.30-ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ
ಜೆ.ಸಿ.ನಗರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಸಾಬ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್ ಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಜಯಮಹಲ್ ಬಳಿಯ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಇಂದು ಬೆಳಿಗ್ಗೆ ಮುತ್ತಿಗೆ ಹಾಕಿದ್ದರು. ತ್ವರಿತ ಕ್ರಮ ಕೈಗೊಳ್ಳಬೇಕಾದ ಪಿಎಸ್‌ಐ ಹಾಗೂ ಹೆಡ್ ಕಾನ್‌ಸ್ಟೆಬಲ್ ಕರ್ತವ್ಯಲೋಪ ಎಸಗಿದ್ದರು.
ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ, ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
‘ಜೆ.ಸಿ.ನಗರ ಠಾಣೆ ಇನ್‌ಸ್ಪೆಕ್ಟರ್‌ ವರ್ಗಾವಣೆ ಆಗಿದ್ದು, ಸದ್ಯ ಈ ಹುದ್ದೆ ಖಾಲಿ ಇದೆ. ಪಿಎಸ್‌ಐ ರಾಜೇಸಾಬ್ ಅವರಿಗೆ ಪ್ರಭಾರಿಯಾಗಿ ಠಾಣಾಧಿಕಾರಿ ಜವಾಬ್ದಾರಿ ನೀಡಲಾಗಿತ್ತು. ಆದರೆ, ಅವರು ತ್ವರಿತವಾಗಿ ಸ್ಥಳಕ್ಕೆ ಹೋಗದಿರುವುದರಿಂದ ಪ್ರತಿಭಟನೆ ತೀವ್ರ ರೂಪ ಪಡೆದಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿ ಅಮಾನತು ಮಾಡಲಾಗಿದೆ.