ಎಫ್ ಪಿಓ ಗಳಿಂದ ರೈತ ಸಮುದಾಯದ ಬಲವರ್ಧನೆ: ಆರ್.ಜಿ.ತಿಪ್ಪೇಸ್ವಾಮಿ

ಜಗಳೂರು. ಜು.24; ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೇತೃತ್ವದಲ್ಲಿ ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಜನ್ಮತಾಳಿದ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗಳು ರೈತರಿಂದ ರೈತರಿಗಾಗಿ ಜನ್ಮತಾಳಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾ ಜಂಟಿ ಸಹಾಯಕ ಕೃಷಿ ಉಪ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಹೇಳಿದರು. ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಆರಂಭವಾಗಿರುವ “ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ” ಮತ್ತು ಕೃಷಿ ಇಲಾಖೆ ಜಗಳೂರು ಹಾಗೂ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಪ್ರಧಾನ ರೈತ ತರಬೇತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಕೃಷಿ ಇಲಾಖೆಯಿಂದ ರೈತರಿಗೆ ನೂರಾರು ಸೌಲಭ್ಯಗಳು ಸಿಗುತ್ತಿದ್ದು ರೈತ ಉತ್ಪಾದಕ ಕಂಪನಿಗಳ ಶೇರುದಾರರು ಸದುಪಯೋಗ ಪಡೆಸಿಕೊಳ್ಳಬೇಕು. ರೈತರಿಗಾಗಿ ಡ್ರೋಣ್ ಮೂಲಕ ಔಷದ ಸಿಂಪಣೆ ಉಪಕರಣಗಳು ರೈತ ಉತ್ಪಾದಕ ಕಂಪನಿಗಳ ಮೂಲಕ ಬಳಕೆ ಮಾಡಿಕೊಳ್ಳಬಹುದು. ರೈತ ಶಕ್ತಿ ಯೋಜನೆ ಅಡಿ ಎಲ್ಲ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದ್ದು ಪ್ರತಿ ಎಕರೆಗೆ ೨೫೦ ರೂ ನೀಡಲಾಗುತ್ತಿದ್ದು ಸಹಾಯಧನವನ್ನು ಬಳಸಿಕೊಳ್ಳಬೇಕು.ಮಹಿಳಾ ರೈತರಿಗೆ ಪ್ರತ್ಯೆಕವಾಗಿ ಕೃಷಿ ಪಂಡಿತ ಪ್ರಶಸ್ತಿ ನೀಡುತಗತಿದ್ದು, ಅರ್ಜಿ ಸಲ್ಲಿಸಬಹುದು. “ಸೆಲ್ಕೋ” ಕಂಪನಿಯ ನೆರವು ಪಡೆದು ಸೌರ ಶಕ್ತಿ  ಉಪಕರಣಗಳನ್ನು ರೈತರು ಬಳಸಿಕೊಳ್ಳಿ. ಕೋವಿಡ್ ನಂತಹ ಕಠಿಣ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದ ಪ್ರಗತಿ ಆರ್ಥಿಕ ಕೊಡುಗೆ ಗಣನೀಯವಾದುದು. ರೈತರ ಸಬಲೀಕರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಮಾತನಾಡಿ, ರೈತ ಸಮುದಾಯ ಬೆಳವಣಿಗೆಗೆ ರೈತ ಉತ್ಪಾದಕ ಕಂಪನಿಗಳು ಆಸರೆಯಾಗುತ್ತಿವೆ. ಕೃಷಿಯಲ್ಲಿ ಗಣನೀಯ ಬೆಳವಣಿಗೆ ಮತ್ತು ಮೌಲ್ಯವರ್ಧನೆ ಎಫ್ ಪಿಗಳು ಅನ್ನದಾತರಿಗೆ ಸಹಕಾರಿಯಾಗುತ್ತಿವೆ. ರೈತರಿಗೆ ಬೇಕಾಗುವ ಗೊಬ್ಬರ ಔಷಧಗಳು ಮತ್ತು ಬಿತ್ತನೆ ಬೀಜಗಳು ಸರಕಾರ ನಿಗದಿ ಪಡಿಸಿದ ಬೆಲೆಗೆ ಎಫ್ ಪಿಓ ಗಳಲ್ಲಿ ಸಿಗುತ್ತವೆ‌. ರೈತರು ಯೂರಿಯಾ ಬಳಕೆ ಕಡಿಮೆ ಮಾಡಿ, ನ್ಯಾನೋ ಯೂರಿಯ ಬಳಕೆ ಮಾಡಬೇಕು. ಮೆಕ್ಕೇಜೋಕ್ಕೆ ಲದ್ದಿ ಹುಳುಗಳು ಕಾಣಿಸಿಕೊಂಡಿದ್ದು ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಹತ್ತಿ, ಶೇಂಗಾ ಬೆಳೆಗಳಿಗೆ ತಗುಲಿದ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ವಿವರಿಸಿದರು.ತೋಟಗಾರಿಕಾ ವಿಜ್ಞಾನಿ ಡಾ.ಎಂ.ಜಿ.ಬಸವನಗೌಡ ಮಾತನಾಡಿ, ಜಗಳೂರು ತಾಲೂಕಿನಲ್ಲಿ ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಈರುಳ್ಳಿ ಬೆಳೆಗೆ ಪೂರಕವಾದ ವಾತಾವರಣವಿದ್ದು ಭೀಮಾ ಸೂಒರ್ ತಳಿಯ ಈರುಳ್ಳಿ ಬೀಜಗಳನ್ನು ಬಿತ್ತನೆ ಮಾಡಿದರೆ ಉತ್ಪಾದನೆ ಮತ್ತು ಇಳುವರಿ ಹೆಚ್ಚು ಬರುತ್ತದೆ ಎಂದರು.ಕೆವಿಕೆ ಮಣ್ಣು ವಿಷಯ ತಜ್ಞ ಸಣ್ಣಗೌಡರ್ ಮಾತನಾಡಿ, ಮಣ್ಣು ಸಂರಕ್ಷಣೆಯಿಂದ ಅಧಿಕ ಉತ್ಪಾದನೆ ಮಾಡಬಹುದು. ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯ ತಜ್ಞರ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳಿ ಎಂದರು.ಕಾರ್ಯಕ್ರಮದಲ್ಲಿ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಮೆದಗಿನಕೆರೆ ಮಂಜುನಾಥ್, ಉಪಾಧ್ಯಕ್ಷರಾದ ಸೋಮನಗೌಡ ಎಸ್.ಎಂ., ನಿರ್ದೇಶಕರಾದ ಉಮಾಪತಿ, ಕೃಷ್ಣಮೂರ್ತಿ, ಬಸವನಗೌಡ, ಎಚ್.ಜಿ.ನಾಗರಾಜ್, ಕವಿತಾ ಸ್ವಾಮಿ, ಅರಿಶಣಗುಂಡಿ ನಾಗರಾಜ್, ನಿಬಗೂರು ರೇವಣಸಿದ್ದಪ್ಪ ಕಂಪನಿಯ ಸಿಇಓ ಮನೋಜ್ ಕುಮಾರ್, ಎಲ್ ಆರ್ ಪಿಗಳಾದ ಕಿರಣ್ ಕುಮಾರ್, ಆದರ್ಶ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.