ಎಫ್ ಆರ್ ಪಿ ದರ 8.5ಕ್ಕೆ ಕಡಿತಗೊಳಿಸಿ: ಬಡಗಲಪುರ ನಾಗೇಂದ್ರ

ಸಂಜೆವಾಣಿ ನ್ಯೂಸ್
ಮೈಸೂರು: ಜು.26:- ಎಫ್‍ಆರ್ ಪಿ ದರ10.25 ಏರಿಕೆ ಮಾಡಿರುವುದನ್ನು 8.5ಕ್ಕೆ ಸೀಮಿತಗೊಳಿಸಿ ಎಂದು ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಮೈಸೂರಿನ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಫ್ ಆರ್ ಪಿ ಜಾರಿಗೊಳಿಸಲು ನಿರ್ಧರಿಸಿದೆ. ಇಳುವರಿ ಆದಾರದ ಮೇಲೆ ಹಣ ನೀಡುವುದು ಮಾನದಂಡವಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡುವವರೆಗೂ ಅದನ್ನ ಹಳೆ ಬಿಲ್ ಆಧಾರದ ಮೇಲೆ ನೀಡಬೇಕು. ಆದರೆ, ಬಣ್ಣಾರಿ ಸೇರಿದಂತೆ ಇತರೆ ಕಾರ್ಖಾನೆಗಳು ಇದುವರೆಗೂ ಅಂತಿಮ ಬಿಲ್ ಬಿಡುಗಡೆ ಮಾಡಿಲ್ಲ. ಕಾರ್ಖಾನೆ ಮತ್ತೆ ಶುರು ಮಾಡುವ ಮುನ್ನ ಕಬ್ಬು ಬೆಳೆಯ ಹಳೆ ಪೇಮೆಂಟ್ ನೀಡಿ. ಹಳೆ ಆದೇಶದ ಮೇರೆಗೆ ಬಾಕಿ ಹಣ ನೀಡಿ. ಈ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದ ಈ ಎಫ್ ಆರ್ ಪಿಯಿಂದ ಕಾರ್ಖಾನೆಗಳ ಮಾಲೀಕರಿಗೆ ಲಾಭವಾಗುತ್ತಿದೆ ಎಂದರು.
ಎರಡು ದಿನದಲ್ಲಿ ನೀರು ಬಿಡಿ: ರಾಜ್ಯದಲ್ಲಿ ಇಷ್ಟು ದಿನ ಬರದ ಛಾಯೆ ಇತ್ತು. ಆದರೆ ಈಗ ಮಳೆ ಬಂದು ರೈತರ ಜೀವ ಉಳಿದಂತಾಗಿದೆ. ರಾಜ್ಯದಲ್ಲಿ ವಿವಿಧ ರೀತಿಯ ವಸ್ತು ಸ್ಥಿತಿ ಇದೆ. ರಾಜ್ಯದ ಎಲ್ಲಾ ಅಣೆಕಟ್ಟುಗಳು ತುಂಬುವ ಹಂತಕ್ಕೆ ಬಂದಿದೆ. ಕೃಷಿಗಾಗಿ ಎರಡು ದಿನದಲ್ಲಿ ನಾಲೆಗಳಿಗೆ ನೀರು ಬಿಡಿ ಎಂದು ಆಗ್ರಹಿಸಿದರು.
ಮುಂದಿನ ತಿಂಗಳಲ್ಲಿ ರೈತರು ಭತ್ತ ನಾಟಿ ಮಾಡಬೇಕು. ಇಲ್ಲವಾದರೆ ಭತ್ತ ಫಸಲು ಬರಲ್ಲ. ಹೀಗಾಗಿ ಭತ್ತ ನಾಟಿಗೆ ನೀರು ನೀಡಲು ಸಿದ್ದತೆ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲಾ ಸಮಿತಿಗಳು ಸಭೆ ಸೇರಿ ಕೃಷಿಗೆ ನೀರು ನೀಡುವಂತೆ ಒತ್ತಾಯಿಸಿದರು. ರೈತರ ಅನುಭವದ ಮೇಲೆ ಐಸಿಸಿ ನೀರು ಬಿಡುಗಡೆ ಬಗ್ಗೆ ತೀರ್ಮಾನ ಮಾಡಬೇಕೆಂದರು.
ರಾಜ್ಯದಲ್ಲಿ ಬರದ ಛಾಯೆ 100 ತಾಲೂಕಿನಲ್ಲಿ ಇನ್ನೂ ಇದೆ. ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಒಣಗುತ್ತಿದೆ. ಈ ಕುರಿತು ಚಳುವಳಿ ಮಾಡಿದ ನಂತರ ನೀರು ಬಿಟ್ಟಿದ್ದಾರೆ. ಈಗ ಹೋಗುತ್ತಿದ್ದ ಪ್ರಾಣ ಉಳಿಸಿದಂತಿದೆ. ನಾಳೆಯೊಳಗೆ ಕೆ.ಆರ್ ಎಸ್ 110 ಅಡಿ ತುಂಬುವ ಸಾಧ್ಯತೆಯಿದೆ. ಈಗ ನಾವು ಭತ್ತ ಹಾಕುವ ಸಮಯ, ಆಗಸ್ಟ್ ಒಳಗೆ ನಾವು ನಾಟಿ ಮಾಡಬೇಕು. ಸ್ವಲ್ಪ ತಡವಾದರೂ ಬೆಳೆ ನಷ್ಟ ಆಗತ್ತದೆ. ಹಾಗಾಗಿ ಅಧಿಕಾರಿಗಳು ಭತ್ತ ಬೆಳೆಯಲು ನೀರು ಕೊಡುವ ಕುರಿತು ಸಭೆ ನಡೆಸಬೇಕು. ಮುಂಗಾರು ಭತ್ತ ಬೆಳೆಯಲು ಸಹಕಾರ ನೀಡಬೇಕು. ಕೆರೆಕಟ್ಟೆಗಳನ್ನು ತುಂಬುವ ನಿಟ್ಟಿನಲ್ಲಿ ಎಲ್ಲವನ್ನೂ ಮೀಟಿಂಗ್ ಮಾಡಿ ತೀರ್ಮಾನ ಮಾಡಬೇಕೆಂದರು.
ಬೆಂಗಳೂರಿಗೆ ಪಾದಯಾತ್ರೆ:
ದೇಶದಲ್ಲಿ ಕೊಬ್ಬರಿ ಬೆಳೆ ಬೆಲೆ ನೆಲಕಚ್ಚಿದೆ. ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಬೆಲೆ ಸುಧಾರಣೆಗೆ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಆಮದು ರಪ್ತುನಿಂದ ಈ ಸಮಸ್ಯೆ ಉಂಟಾಗಿದೆ. ರಾಜ್ಯ ಸರ್ಕಾರ ಬೆಂಬಲ ಬೆಲೆ ಅಂತ 1700 ರೂ.ನಿಗದಿ ಮಾಡಿದೆ. ಆದರೆ, ನಾವು ಕೇಳಿದ್ದು 5ಸಾವಿರ ರೂ. ಕನಿಷ್ಠ 2ಸಾವಿರ ರೂ. ಆದರೂ ಬೆಂಬಲ ಬೆಲೆ ನೀಡಿ ಎಂದು ಮನವಿ ಮಾಡಿದರು.
ಆ.12ರಂದು ಕೊಬ್ಬರಿ ಬೆಳೆಯುವ ಜಿಲ್ಲೆಗಳ ಎಂಪಿಗಳ ಮನೆಗಳ ಮುಂದೆ ಪಿಕೆಟಿಂಗ್ ಮಾಡಲಾಗುವುದು.15 ಜಿಲ್ಲೆಗಳಲ್ಲಿ ಪಿಕೆಟಿಂಗ್ ನಡೆಯಲಿದೆ. ಅ.2 ರಂದು ತಿಪಟೂರಿನಿಂದ ಬೆಂಗಳೂರಿಗೆ 50ಸಾವಿರ ರೈತರು ಚಳುವಳಿ ಪಾದಯಾತ್ರೆ ಮಾಡಲಿದ್ದೇವೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಹಿನ್ನಲೆ ಈ ಕುರಿತು ಮಾತನಾಡಿದ ಬಡಗಲಪುರ ನಾಗೇಂದ್ರ, ಸರಿಯಾದ ಸಮಯದಲ್ಲಿ ರೈತರಿಗೆ ನೀರು ಕೊಡಿ. ರೈತರೇ ಭತ್ತ ಬೆಳೆದು ನಿಮಗೆ ಕೊಡುತ್ತಾರೆ. ಅಕ್ಕಿಕಾಗಿ ಕೇಂದ್ರದ ಮುಂದೆ ಕೈ ಚಾಚಿದರು. 34 ರೂಪಾಯಿ ಕೊಡುತ್ತೀವಿ ಅಂದರೂ ಕೇಂದ್ರ ಅಕ್ಕಿ ಕೊಡಲಿಲ್ಲ. ಅದೇ ಅಕ್ಕಿಯನ್ನು ಓಪನ್ ಮಾರ್ಕೆಟ್ ನಲ್ಲಿ 31 ರೂಪಾಯಿಗೆ ಕೊಟ್ಟಿದ್ದಾರೆ. ಛತ್ತೀಸಗಡ, ಪಂಜಾಬ್ ಸೇರಿ ಇತರ ರಾಜ್ಯಗಳಲ್ಲಿ ಅಕ್ಕಿ ಕೊಳ್ಳಲು ಮುಂದಾದರು. ಎಲ್ಲೂ ಅಕ್ಕಿ ಸಿಗಲಿಲ್ಲ. ರೈತರಿಗೆ ನೀರು ನೀಡಿ ರೈತರೇ ಭತ್ತ ಬೆಳೆದು ಅಕ್ಕಿ ಕೊಡುತ್ತಾರೆ. 2 ದಿನದಲ್ಲಿ ರೈತರ ನಾಲೆಗಳಿಗೆ ನೀರು ಬಿಡಿ ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಎನ್ ಪ್ರಸನ್ನಗೌಡ ಇನ್ನಿತರರು ಇದ್ದರು.