ಎಫ್‍ಐಆರ್ ಹಿನ್ನೆಲೆ: ಕೆಕೆಆರ್‍ಡಿಬಿ ಅಧ್ಯಕ್ಷ ರೇವೂರ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಕಲಬುರಗಿ.ಡಿ.31:ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅವಿರೋಧವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿಗೆ ತಲಾ ಒಂದು ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಕೊಡುವುದಾಗಿ ಘೋಷಣೆ ಮಾಡಿದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಕೊಟ್ಟ ದೂರಿನ ಮೇರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ರೇವೂರ್ ಅವರು ರಾಜೀನಾಮೆ ಸಲ್ಲಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಲ್ಲಮಪ್ರಭು ಪಾಟೀಲ್ ನೆಲೋಗಿ ಅವರು ಆಗ್ರಹಿಸಿದರು.
ಗುರುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೇ ಇದ್ದರೂ ಸಹ ಎಫ್‍ಐಆರ್ ದಾಖಲಾದ ತಕ್ಷಣ ಆ ಹುದ್ದೆಯಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ತನಿಖೆ ಮುಗಿದ ಮೇಲೆ ನಿರಪರಾಧಿ ಆಗುವವರೆಗಾದರೂ ಹುದ್ದೆಗೆ ರಾಜೀನಾಮೆ ನೀಡಿ ಹೊರಬರಬೇಕು ಎಂದು ಒತ್ತಾಯಿಸಿದರು.
ಮಂಡಳಿಯ ಅಧ್ಯಕ್ಷರಾಗಿ ರೇವೂರ್ ಅವರು ಕಲ್ಯಾಣ ಕರ್ನಾಟಕದ ಹಿತವನ್ನು ರಕ್ಷಿಸುವಲ್ಲಿಯೂ ಸಹ ಸಂಪೂರ್ಣ ವಿಫಲವಾಗಿದ್ದಾರೆ. ಕಲಬುರ್ಗಿಯಲ್ಲಿನ ನವೀಕೃತ ಇಂಧನ ಮೂಲಗಳ ಕಚೇರಿ ಹಾಗೂ ಆಹಾರ ಪ್ರಯೋಗಾಲಯವನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ಅವುಗಳನ್ನು ಉಳಿಸಿಕೊಳ್ಳುವಲ್ಲಿಯೂ ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1000 ಕೋಟಿ ರೂ.ಗಳು, ಆನಂತರ 1,500 ಕೋಟಿ ರೂ.ಗಳ ವಾರ್ಷಿಕ ಅನುದಾನವನ್ನೂ ಸಹ ಕೊಡಲಾಗಿತ್ತು. ಈಗ ಅದು ಶೇಕಡಾ 30ರಷ್ಟು ಕಡಿತಗೊಂಡಿದೆ. ಹೀಗಾದರೆ ಮಂಡಳಿ ರಚನೆಯ ಉದ್ದೇಶವನ್ನೇ ಸ್ವತ: ಅಧ್ಯಕ್ಷ ರೇವೂರ್ ಅವರು ಹಾಳು ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಕ್ವಿಂಟಲ್ ತೊಗರಿಗೆ ಹಿಂದಿನ ಕಾಂಗ್ರೆಸ್ ಸರ್ಕಾರವು ಪ್ರೋತ್ಸಾಹಧನವನ್ನು ಕೊಡುತ್ತಿತ್ತು. ರಾಜ್ಯ ಬಿಜೆಪಿ ಸರ್ಕಾರವೂ ಸಹ ಯಾವುದೇ ಪ್ರೋತ್ಸಾಹಧನವನ್ನು ಕೊಡದೇ ಮೊಟಕುಗೊಳಿಸಿದೆ. ಆ ಕುರಿತೂ ಸಹ ಮಂಡಳಿಯ ಅಧ್ಯಕ್ಷರು ಧ್ವನಿ ಎತ್ತಲಿಲ್ಲ. ಕೊನೆಗೆ ನಿಯೋಗವನ್ನು ಸಹ ತೆಗೆದುಕೊಂಡು ಹೋಗಲಾಗಲಿಲ್ಲ ಎಂದು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಏಳು ಗ್ರಾಮ ಪಂಚಾಯಿತಿಗಳ ಚುನಾವಣಾ ಫಲಿತಾಂಶ ಬಂದಿದ್ದು, ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ ಎಂದು ಮಂಡಳಿಯ ಅಧ್ಯಕ್ಷರು ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಸುಳ್ಳು ಹೇಳಿದ್ದಾರೆ. ಏಳು ಗ್ರಾಮ ಪಂಚಾಯಿತಿಗಳಲ್ಲಿ ಐದು ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಆ ಐದೂ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಮುಖಂಡರಾದ ನೀಲಕಂಠರಾವ್ ಮೂಲಗೆ, ಈರಣ್ಣ ಝಳಕಿ, ಮಾಜಿ ಮೇಯರ್ ದಶರಥ್ ಬಾಬು ಒಂಟಿ ಮುಂತಾದವರು ಉಪಸ್ಥಿತರಿದ್ದರು.