ಎಫ್‌ಸಿಐ : ಅಕ್ಕಿ ಸಾಗಾಣಿಕೆ ನಿಯಮ ಪಾಲನೆ ನಿರ್ಲಕ್ಷ್ಯ – ಆರೋಪ

ರಾಯಚೂರು.ನ.೨೫- ಭಾರತೀಯ ಆಹಾರ ನಿಗಮ ರಾಯಚೂರು ವಿಭಾಗದ ಗೋಡಾನ್‌ನಿಂದ ತಾಲೂಕಿನ ಎಫ್‌ಎಸ್‌ಡಿ ಗೋಡಾನ್‌ಗಳಿಗೆ ಅಕ್ಕಿ ಸಾಗಾಣಿಕೆಯಲ್ಲಿ ಭಾರೀ ಅಪರತಪರಗಳ ಬಗ್ಗೆ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಸಂಘದ ವೈ.ಎನ್.ಶ್ರೀನಿವಾಸ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಅಕ್ಕಿ ಸಾಗಾಣಿಕೆಗೆ ಸಂಬಂಧಿಸಿದಂತೆ ತನ್ನದೇಯಾದ ನಿಯಮ ರೂಪಿಸಲಾಗಿದೆ. ಆದರೆ, ಎಫ್‌ಸಿಐ ಗೋಡಾನ್‌ನಿಂದ ಅಕ್ಕಿ ಸಾಗಿಸುವಾಗ ಯಾವುದೇ ನಿಯಮಗಳನ್ನು ಪಾಲಿಸದಿರುವುದು ಅಕ್ಕಿ ಸಾಗಾಣಿಕೆಗೆ ಸಂಬಂಧಿಸಿ ಅನೇಕ ಅನುಮಾನ ಮೂಡುವಂತೆ ಮಾಡಿದೆ. ಎಫ್‌ಸಿಐ ಗೋಡಾನ್‌ನಿಂದ ಅಕ್ಕಿ ಯಾವ ಗೋಡಾನ್‌ಗೆ ಕಳುಹಿಸಲಾಗುತ್ತದೆ ಮತ್ತು ಯಾವ ಗೋಡಾನ್‌ಗೆ ಎಷ್ಟು ಮಟ್ಟದ ಅಕ್ಕಿ ಸಾಗಿಸಲಾಗುತ್ತದೆಂದು ನಮೂದಿಸಬೇಕು. ಆದರೆ, ಈ ದಾಖಲೆ ಗಣಕೀಕೃತವಾಗಿರಬೇಕು. ಆದರೆ, ಎಫ್‌ಸಿಐ ಗೋಡಾನ್‌ನಿಂದ ಕೈಬರಹದ ಮೂಲಕ ಚೀಟಿ ಕೊಡಲಾಗುತ್ತದೆ.
ಟ್ರಕ್ ಚೀಟಿಗಳಲ್ಲಿ ಲಾರಿ ಡ್ರೈವರ್ ಹೆಸರು, ಬುಕ್ ನಂಬರ್, ಯಾವ ತಾಲೂಕಿನ ಯಾವ ಗೋಡಾನ್‌ಗೆ ಸರಕು ಸಾಗಿಸಲಾಗುತ್ತದೆ ಎನ್ನುವ ವಿವರ ನಮೂದಿಸಬೇಕು. ಸರಕು ಪಡೆಯುವ ಅಧಿಕೃತ ಪ್ರತಿನಿಧಿಯ ಪದನಾಮದೊಂದಿಗೆ ಸಹಿ ಪಡೆಯಬೇಕು. ಆದರೆ, ಇದ್ಯಾವುದನ್ನು ಪಾಲಿಸಲಾಗುತ್ತಿಲ್ಲ. ಉದಾಹರಣೆಗಾಗಿ ಚೀಟಿ ನಂಬರ್ ೫೩೫೦೬ ದಿನಾಂಕ ೧೭-೯-೨೦೨೧ ಟ್ರಕ್ ಚೀಟಿ ನಂಬರ್ ೬೪೦೬೧ ದಿನಾಂಕ ೨೦-೧೦-೨೦೨೧, ಟ್ರಕ್ ಚೀಟಿ ನಂಬರ್ ೬೪೨೨೦ ದಿನಾಂಕ ೬-೧೧-೨೦೨೧ ಚೀಟಿಗಳನ್ನು ವೀಕ್ಷಿಸಿದರೇ, ಎಫ್‌ಸಿಐ ಗೋಡಾನ್‌ನಲ್ಲಿ ನಡೆಯುವ ವ್ಯವಹಾರ ಸ್ಪಷ್ಟಗೊಳ್ಳುತ್ತದೆ.
ಈಗಾಗಲೇ ಬೆಂಗಳೂರು ಲೋಕಾಯುಕ್ತ ಕಛೇರಿಯಲ್ಲಿ ೧೦ ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ರೈಸ್‌ಮಿಲ್‌ಗೆ ಸಾಗಿಸಿದ ಪ್ರಕರಣ ವಿಚಾರಣೆಯಲ್ಲಿದೆ. ಅಲ್ಲದೇ, ವಿವಿಧ ತಾಲೂಕುಗಳಲ್ಲಿ ಅನ್ನ ಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಎಫ್‌ಸಿಎ ಗೋಡಾನ್‌ನಿಂದ ಸರ್ಕಾರದ ಪಡಿತರ ಅಕ್ಕಿ ಇತರೆ ಆಹಾರ ಧಾನ್ಯ ಬಿಡುಗಡೆ ಸಂದರ್ಭದಲ್ಲಿ ಟ್ರಕ್ ಚೀಟಿ ಸಂಪೂರ್ಣ ಮಾಹಿತಿ ಇರುವುದು, ಗಣಕೀಕೃತ ಚೀಟಿ ಹೊಂದಿರುವುದು, ಎಫ್‌ಸಿಐ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಎಫ್‌ಸಿಐ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೇ, ಗೋಡಾನ್ ಮುಂದೆ ಧರಣಿ ಸತ್ಯಾಗ್ರಹ ನಡೆಸಿ, ಪ್ರತಿಭಟಿಸಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.