ಎಫ್‌ಎಸ್‌ಟಿಪಿ ಘಟಕ ಶಾಸಕ ವಿಶ್ವನಾಥ್ ಭೂಮಿಪೂಜೆ

ಬೆಂಗಳೂರು, ಏ. ೪- ರಾಜ್ಯದಲ್ಲೇ ಮೊದಲ ಬಾರಿಗೆ ಯಲಹಂಕ ಕ್ಷೇತ್ರದ ರಾಜಾನುಕುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿಲ್ವರ್ ಓಕ್ ಬಳಿ ಸುಮಾರು ೪೪ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಎಫ್.ಎಸ್.ಟಿ.ಪಿ. ಘಟಕ ನಿರ್ಮಾಣವಾಗಲಿದೆ.
ಯಲಹಂಕ ಕ್ಷೇತ್ರದ ರಾಜಾನುಕುಂಟೆಯಲ್ಲಿ ಆರಂಭಿಸುತ್ತಿರುವ ಎಫ್.ಎಸ್.ಟಿ.ಪಿ. ಘಟಕದ ಕಾಮಗಾರಿಗೆ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಇಂದು ಭೂಮಿಪೂಜೆ ನೆರವೇರಿಸಿದರು.
ಈ ಹಿಂದೆ ನಗರ ಪ್ರದೇಶದಲ್ಲಿ ಎಫ್.ಎಸ್.ಟಿ.ಪಿ. ಘಟಕ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಈ ಹಿಂದೆ ಗ್ರಾಮಾಂತರ ಪ್ರದೇಶದ ಶೌಚಾಲಯಗಳಲ್ಲಿ ಫಿಟ್ ಗುಂಡಿಗಳನ್ನು ನಿರ್ಮಿಸಿ ತುಂಬಿದ ಬಳಿಕ ಕೆರೆ, ಚರಂಡಿಗೆ ಬಿಡಲಾಗುತ್ತಿತ್ತು. ಆದರೆ ಇದೀಗ ಎಫ್.ಎಸ್.ಟಿ.ಪಿ. ಘಟಕ ನಿರ್ಮಾಣವಾಗುವುದರಿಂದ ಕೊಳಚೆ ನೀರನ್ನು ಶುದ್ಧೀಕರಿಸುವುದರ ಜೊತೆಗೆ ಮಲತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಗೊಬ್ಬರವನ್ನಾಗಿಸಿ ಕೃಷಿಗೆ ಬಳಸಬಹುದಾಗಿದೆ. ಈ ಘಟಕಕ್ಕೆ ಸುತ್ತಮುತ್ತ ಗ್ರಾಮಪಂಚಾಯಿತಿಯವರೂ ಕೂಡ ಮಲತ್ಯಾಜ್ಯ ನೀಡಬಹುದಾಗಿದೆ. ಇದರಿಂದ ಗ್ರಾಮನೈರ್ಮಲ್ಯ ಕಾಪಾಡಲು ಇನ್ನೂ ಹೆಚ್ಚಿನ ಅನುಕೂಲವಾದಂತಾಗಿದೆ.
ಕಾಮಗಾರಿಗೆ ಭೂಮಿಪೂಜೆ ಮಾಡಿದ ಬಳಿಕ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಸುಮಾರು ೪೪ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಎಫ್.ಎಸ್.ಟಿ.ಪಿ. ಘಟಕ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಘಟಕ ಇದಾಗಿದ್ದು, ಇಲ್ಲಿ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಲಾಗುತ್ತದೆ. ಜೊತೆಗೆ ಶೌಚಾಲಯದ ತ್ಯಾಜ್ಯವನ್ನು ಗೊಬ್ಬರ ಮಾಡಬಹುದಾಗಿದೆ. ಮುಂದಿನ ಮೂರು – ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಈ ವೇಳೆ ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷ ವೀರಣ್ಣ ರಿಗ್ಲೆ, ಸದಸ್ಯ ಎಸ್.ಟಿ.ಡಿ. ನರಸಿಂಹಮೂರ್ತಿ, ಪಿಡಿಓ ರಾಜೇಶ್ ಸೇರಿದಂತೆ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.