ಎಫ್‍ಪಿಎಐ ಸಂಸ್ಥೆಯಿಂದ ಲಸಿಕಾಕರಣ, ಕ್ಯಾನ್ಸರ್ ಅರಿವು ಕಾರ್ಯಕ್ರಮ

ಬೀದರ,ಏ 29: ಇತ್ತೀಚಿಗೆ ಮಹಿಳೆಯರಲ್ಲಿ ಗರ್ಭಕೋಶ ಕೊರಳಿನ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ರೋಟರಿ ಕ್ಲಬ್ ಸಹಯೋಗದಿಂದ ಎಫ್‍ಪಿಎಐ ಸಂಸ್ಥೆಗೆ ಗರ್ಭಕೋಶ ಕೊರಳಿನ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಉಪಕರಣ ನೀಡಲಾಗಿದೆ. ಆದ್ದರಿಂದ ಮಹಿಳೆಯರೆಲ್ಲರೂ ಈ ತಪಾಸಣೆ ಮಾಡಿಸಿಕೊಂಡು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಎಫ್‍ಪಿಎಐ ಸಂಸ್ಥೆಯ ಸದಸ್ಯ ಹಾಗೂ ಬೀದರನ ಖ್ಯಾತ ಎಲುಬುಕೀಲು ಶಸ್ತ್ರಚಿಕಿತ್ಸಾತಜ್ಞ ಡಾ. ರಘು ಕೃಷ್ಣಮೂರ್ತಿ ಕರೆ ನೀಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ ಪಿ ಎಐ) ಬೀದರ ಶಾಖೆಯ ವತಿಯಿಂದ ಶಾಖಾ ಸಭಾಂಗಣದಲ್ಲಿ “ವಿಶ್ವ ರೋಗನಿರೋಧಕ ಸಪ್ತಾಹ” ದÀ ಅಂಗವಾಗಿ ಮಹಿಳೆಯರಿಗೆ ಮಕ್ಕಳ ಲಸಿಕಾಕರಣ ಹಾಗೂ ಗರ್ಭಕೋಶ ಕೊರಳಿನ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್” ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಫ್ ಪಿ ಎಐಸಂಸ್ಥೆಯು ನಿರಂತರವಾಗಿ 50 ವರ್ಷಗಳಿಂದ ಹಿಂದುಳಿದ ವರ್ಗದವರಿಗೆ, ಬಡಜನರಿಗೆ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆ ಹಾಗೂ ಇನ್ನಿತರ ಆರೋಗ್ಯ ಸೇವೆ ನೀಡುತ್ತಿದೆ ಎಂದ ಅವರು ಮಹಿಳೆಯರಿಗೆ ಪೌಷ್ಟಿಕಾಂಶ ಆಹಾರದ ಕುರಿತು ಮಾಹಿತಿ ತಿಳಿಸಿದರು.
ಬ್ರಿಮ್ಸ್ ನ ಮಕ್ಕಳ ವಿಭಾಗದ ಮುಖ್ಯಸ್ಥೆ ಹಾಗೂ ಉಪನ್ಯಾಸಕಿ ಡಾ. ಶಾಂತಲಾ ಕೌಜಲಗಿ ಇವರು ಮಕ್ಕಳಿಗೆ ಹಾಕುವ ಲಸಿಕೆಗಳ ಕುರಿತು ಸಂಪೂರ್ಣ ಮಾಹಿತಿ ತಿಳಿಸಿದರು. ಹಾಗೂ ಲಸಿಕೆಗಳನ್ನು ಹಾಕುವುದರಿಂದ ಮುಂಬರುವ ರೋಗಗಳನ್ನು ಹೇಗೆ ತಡೆಗಟ್ಟಬಹುದು ಎಂಬುದನ್ನು ತಿಳಿಸಿ, ಎಲ್ಲರು ತಮ್ಮ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ತಪ್ಪದೆ ಲಸಿಕೆಗಳನ್ನು ಹಾಕಿಸಬೇಕೆಂದರು. ಎಫ್ ಪಿ ಎಐ ಸಂಸ್ಥೆಯ ಅಧ್ಯಕ್ಷ ಡಾ. ನಾಗೇಶ ಪಾಟೀಲ್ ಸಂಸ್ಥೆಯಲ್ಲಿ ಸಿಗುವ ಆರೋಗ್ಯ ಸೇವೆಗಳ ಬಗ್ಗೆ ತಿಳಿಸಿದರು.
ಸಂಸ್ಥೆಯ ಕಾರ್ಯಕಾರಿಣಿ ಸಭೆಯ ಸದಸ್ಯರಾದ ಅಂಬುಜಾ ವಿಶ್ವಕರ್ಮ ಹಾಗೂ ಸುಬ್ರಮಣ್ಯ ಪ್ರಭು ಕಾರ್ಯಕ್ರಮದ ಕುರಿತು ಮಾತನಾಡಿದರು. ಸಂಸ್ಥೆಯ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ವೈದ್ಯಾಧಿಕಾರಿ ಡಾ. ಆಕಾಶ ಬುಳ್ಳಾ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷ್ಮಿ ಹುಡುಗೆ ನಿರೂಪಣೆ ಮಾಡಿದರು ಹಾಗೂ ಅಂಕಿ-ಸಂಖ್ಯಾಧಿಕಾರಿ ಹಾಗೂ ಆಪ್ತಸಮಾಲೋಚಕ ವಿನಾಯಕ ಕುಲಕರ್ಣಿ ವಂದಿಸಿದರು.