ಎಪಿಎಂಸಿ ಹಳೆ ಸೆಸ್ ಮುಂದುವರೆಸಲು ಆಗ್ರಹ

ಬಳ್ಳಾರಿ, ಡಿ.23: ಕರ್ನಾಟಕ ಸರಕಾರ ಸಹಕಾರ ಇಲಾಖೆ ಆಧೀನ ಕಾರ್ಯದರ್ಶಿ ಡಿ.15ರಂದು ಆದೇಶವನ್ನು ಹೊರಡಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆಕರಿಸುತ್ತಿರುವ ಮಾರುಕಟ್ಟೆ ಶುಲ್ಕ/ಬಳಕೆದಾರರ ಶುಲ್ಕ ಶೇ.1 ರಷ್ಟು ಹೆಚ್ಚಳ ಮಾಡಿರುವುದನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವಿರೋಧಿಸಿದ್ದು ಹಳೆಯ ಸೆಸ್ 0.35 ಮುಂದುವರೆಸುವಂತೆ ಆಗ್ರಹಿಸಿದೆ.
ರಾಜ್ಯ ಸರ್ಕಾರದ ಸಹಕಾರ ಮತ್ತು ಎಪಿಎಂಸಿ ಸಚಿವರಿಗೆ ಈ ಕುರಿತಂತೆ ಮನವಿ ಪತ್ರವನ್ನು ಸಲ್ಲಿಸಿದ್ದು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ.
ಕೃಷಿ ಮಾರಾಟ ಇಲಾಖೆ ನಿರ್ದೇಶಕ, ಕರಿಗೌಡರ, ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವಾರು ವಿಷಯಗಳ ಬಗ್ಗೆ ವಿವರಣೆಯನ್ನು ನೀಡಿ ಎಪಿಎಂಸಿ ಮಾರುಕಟ್ಟೆ ಕೃಷಿ ಉತ್ಪನ್ನಗಳ ವಹಿವಾಟಿಗೆ ಸಂಬಂಧಿಸಿದ ಅಧಿಸೂಚಿ ಪ್ರಕಾರ ಮಾರುಕಟ್ಟೆ ಪ್ರಾಂಗಣದ ಹೊರಗೆ ನಡೆಯುವ ವಹಿವಾಟು ಮೇಲೆ ಯಾವುದೇ ನಿಯಂತ್ರಣವಾಗಲೀ, ಶುಲ್ಕವಾಗಲೀ ಇರುವುದಿಲ್ಲ. ಪ್ರಾಂಗಣದ ಒಳಗೆ ವ್ಯವಹರಿಸಿದಲ್ಲಿ ಶೇ. 0.35 ಮಾರುಕಟ್ಟೆ ಶುಲ್ಕ ವಿಧಿಸಲಾಗಿದೆ. ಇದರಲ್ಲಿ ಶೇ.0.14 ಪ್ರಾಂಗಣದ ಮೂಲಭೂತ ಸೌಕರ್ಯ, ಪ್ರಾಂಗಣ ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚಕ್ಕೆ ಬಳಕೆ ಮಾಡಲು ಮರುಹಂಚಿಕೆ ಮಾಡಿರುವ ಬಗ್ಗೆ ತಿಳಿಸಿರುವುದಕ್ಕೆ ಅಂದಿನ ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯಮಟ್ಟದ ಸದಸ್ಯರು ಸ್ವಾಗತಿಸಿದ್ದರು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ತಿಳಿಸಿದ್ದಾರೆ.
ಈಗ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ರೈತರು ಕೃಷಿ ಉತ್ಪನ್ನ ವಾಣಿಜ್ಯ ಸುಗ್ರೀವಾಜ್ಞೆ ಕುರಿತು ಪ್ರತಿಭಟನೆಯನ್ನು ಮುಂದುವರೆಸಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ನೀಡದೇ ಸರಕಾರ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಯಾವುದೇ ಮುನ್ಸೂಚನೆಯನ್ನು ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸರ ಏಕಾಏಕಿ ಆದೇಶವನ್ನು ಹೊರಡಿಸಿದ್ದು ಸರಕಾರದ ಈ ಧೋರಣೆಯಿಂದ ರಾಜ್ಯದ ರೈತರು ಹಾಗೂ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದಿದ್ದಾರೆ.
ಕಾರಣ ಡಿ.15ರಂದು ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣ ಹಿಂದಕ್ಕೆ ಪಡೆದು ಪ್ರಾಂಗಣದ ಒಳಗೆ ಹಾಗೂ ಪ್ರಾಂಗಣದ ಹೊರಗೆ ವ್ಯಾಪಾರ ಮಾಡುವ ವರ್ತಕರಿಗೆ ಮಾರುಕಟ್ಟೆ ಶುಲ್ಕ ಒಂದೇ ತೆರನಂತೆ ಇರಬೇಕೆಂಬುದು ನಮ್ಮ ಬೇಡಿಕೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಸುರೇಶ್ ಬಾಬು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ ಎಸ್.ದೊಡ್ಡನಗೌಡ, ಎಪಿಎಂಸಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹಾರುದ್ರಗೌಡ, ಕಾರ್ಯದರ್ಶಿ ರಾಮಚಂದ್ರ ಮೊದಲಾದವರಿದ್ದರು.