ಎಪಿಎಂಸಿ ರಸ್ತೆ ರೈಲ್ವೇ ಅಂಡರ್‌ಬ್ರಿಡ್ಜ್ ಎರಡು ತಿಂಗಳಲ್ಲಿ ಕಾರ್ಯಾರಂಭ

ಪುತ್ತೂರು, ಎ.೪- ದಶಕಗಳ ಬೇಡಿಕೆಯಾಗಿರುವ ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್‌ಬ್ರಿಡ್ಜ್ ನಿರ್ಮಾಣ ಕಾರ್ಯ ಮುಂದಿನ ಎರಡು ತಿಂಗಳ ಒಳಗೆ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಹಂತಗಳು ಪೂರ್ಣಗೊಂಡಿವೆ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.

ಶನಿವಾರ ನಡೆದ ಎಪಿಎಂಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಈ ಕಾಮಗಾರಿಗೆ ಒಟ್ಟು ರೂ. ೧೧.೮೨ ಕೋಟಿಯ ಯೋಜನೆ ಮಾಡಲಾಗಿದೆ.  ಇದರಲ್ಲಿ ರೂ. ೫.೯೧ ಕೋಟಿ ರೈಲ್ವೆ ನೀಡಲಿದೆ. ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ರೂ. ೫.೯೧ ಕೋಟಿ ಸಿಗಲಿದೆ. ೫೦-೫೦ರ ಅನುದಾನ ಹಂಚಿಕೆಯಲ್ಲಿ ರೈಲ್ವೆ ಈ ಕಾಮಗಾರಿ ನಡೆಸಲಿದೆ. ಹಾಸನ ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ (ಎಚ್‌ಎಂಆರ್‌ಡಿಸಿ) ಮತ್ತು ರಾಜ್ಯ ಸರ್ಕಾರದ ಮೂಲಸೌಜಕರ್ಯ ಅಭಿವೃದ್ಧಿ ಇಲಾಖೆಯ ನಡುವೆ ಕೊನೆಯ ಹಂತದ ಮಾತುಕತೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಇದಾದ ಬಳಿಕ ಕಾಮಗಾರಿ ಆರಂಭಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸರ್ಕಾರ ಮತ್ತು ರೈಲ್ವೆ ಇಲಾಖೆ ಅನುದಾನ ಹಂಚಿಕೊಂಡ ಪರಿಣಾಮ ಎಪಿಎಂಸಿಯಿಂದ ಪ್ರತ್ಯೇಕ ಅನುದಾನ ನೀಡುವ ಪ್ರಮೇಯ ಬಂದಿಲ್ಲ ಎಂದು ಅವರು ತಿಳಿಸಿದರು.

ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿ ಖಾಲಿ ಇರುವ ಅಂಗಡಿ ಮಳಿಗೆಗಳಿಗೆ ಪೇಟೆ ಕಾರ್ಯಕರ್ತರಿಂದ ಬೇಡಿಕೆ ಇಲ್ಲದೇ ಇದ್ದಲ್ಲಿ ಇತರರಿಗೆ ಮಾಸಿಕ ಲೀವ್ ಆಂಡ್ ಲೈಸೆನ್ಸ್ ಶುಲ್ಕದ ಆಧಾರದಲ್ಲಿ ನೀಡುವ ಬಗ್ಗೆ ಸಭೆ ನಿರ್ಣಯಿಸಿತು. ಈ ಬಗ್ಗೆ ಚರ್ಚೆ ನಡೆದಾಗ ವರ್ತಕ ಕ್ಷೇತ್ರದ ನಿರ್ದೇಶಕ ಶುಕೂರ್ ಹಾಜಿ ಮಾತನಾಡಿ, ಅಡಕೆ ವರ್ತಕರಿಗೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಭವಿಷ್ಯದಲ್ಲಿ ಎಪಿಎಂಸಿಗೆ ಸಮಸ್ಯೆ ಉಂಟಾಗಬಹುದು ಎಂದು ಎಚ್ಚರಿಸಿದರು. ಅಡಕೆ ಮತ್ತು ಎಪಿಎಂಸಿ ನಿಯಮದಲ್ಲಿ ಬರುವ ಉತ್ಪನ್ನಗಳ ವರ್ತಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಲಾಗಿರುವ ಗೋದಾಮನ್ನು ಬಾಡಿಗೆ ಆಧಾರದಲ್ಲಿ ನೀಡುವ ಬಗ್ಗೆ ಚರ್ಚಿಸಲಾಯಿತು. ಪಡಿತರ ಆಹಾರ ಸಾಮಗ್ರಿಗಳ ದಾಸ್ತಾನು ಇರಿಸಲು ಸಂಬಂಧಪಟ್ಟ ಏಜೆನ್ಸಿಯವರು ಬಾಡಿಗೆಗೆ ಕೇಳಿದ್ದಾರೆ. ಈ ಬಗ್ಗೆ ಸರ್ಕಾರಿ ಮೌಲ್ಯದಂತೆ ಬಾಡಿಗೆ ನೀಡುವ ಕುರಿತು ಅವರಿಗೆ ಮಾಹಿತಿ ನೀಡಲಾಗುವುದು. ಒಂದು ವೇಳೆ ಅವರು ನಿರಾಕರಣೆ ಮಾಡಿದರೆ ಪತ್ರಿಕಾ ಪ್ರಕಟಣೆ ನೀಡಿ ಮುಕ್ತ ಆಯ್ಕೆ ಪ್ರಕ್ರಿಯೆ ನಡೆಸುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಎಪಿಎಂಸಿ ಯಾರ್ಡ್‌ನಲ್ಲಿ ನಿರ್ಮಿಸಿರುವ ಹೊಸ ಗೋದಾಮು ಮತ್ತು ಸೋಲಾರ್ ವಿದ್ಯುತ್ ವ್ಯವಸ್ಥೆಯ ಉದ್ಘಾಟನಾ ಸಮಾರಂಭ ಏಪ್ರಿಲ್ ೫ರಂದು ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು ಭಾಗವಹಿಸಲಿದ್ದಾರೆ ಎಂದು ಸಭೆಗೆ ತಿಳಿಸಿದರು.

ಕಾರ್ಯದರ್ಶಿ ರಾಮಚಂದ್ರ ಕಲಾಪ ನಿರ್ವಹಿಸಿದರು. ಉಪಾಧ್ಯಕ್ಷರಾದ ಮಂಜುನಾಥ ಎನ್. ಎಸ್.,  ನಿರ್ದೇಶಕರಾದ ತ್ರಿವೇಣಿ ಪೆರ್‍ವೋಡಿ, ಪುಲಸ್ತ್ಯಾ ರೈ, ಬೂಡಿಯಾರ್ ರಾಧಾಕೃಷ್ಣ ರೈ, ಶುಕೂರ್ ಹಾಜಿ, ಬಾಲಕೃಷ್ಣ ಬಾಣಜಾಲ್, ಕೊರಗಪ್ಪ ಗೌಡ, ತೀರ್ಥಾನಂದ ದುಗ್ಗಳ, ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು ಉಪಸ್ಥಿತರಿದ್ದರು.