ಎಪಿಎಂಸಿ ಮುಚ್ಚಲ್ಲ : ಎಸ್‌ಟಿ ಸ್ಪಷ್ಟನೆ

ಬೆಂಗಳೂರು, ಡಿ. ೨೫- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಸುಧಾರಣೆ ಕಾಯ್ದೆಗಳಿಂದ ಎಪಿಎಂಸಿಗಳು ಮುಚ್ಚಲಿವೆ ಎಂಬ ಅಪಪ್ರಚಾರ ಸರಿಯಲ್ಲ. ಯಾವುದೇ ಕಾರಣಕ್ಕೂ ಎಪಿಎಂಸಿಗಳನ್ನು ಮುಚ್ಚುವುದಿಲ್ಲ ಎಂದು ಸಹಕಾರ ಹಾಗೂ ಎಪಿಎಂಸಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ನಗರದ ಯಶವಂತಪುರ ಎಪಿಎಂಸಿಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಹಾಗೂ ರೈತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡಿರುವ ನೂತನ ಕೃಷಿ ಕಾಯ್ದೆಯಿಂದ ಎಪಿಎಂಸಿಗಳು ಮುಚ್ಚುವುದಿಲ್ಲ ಎಂದರು.
ದೇಶದಲ್ಲಿ ರೈತರಿಗೆ ಅನಾನುಕೂಲವಾಗಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೈತರ ಅನುಕೂಲಕ್ಕಾಗಿ ಕಾಯ್ದೆಗಳಲ್ಲಿ ಬದಲಾವಣೆ ತರಲಾಗಿದೆ. ಎಲ್ಲ ಕಾಯ್ದೆಗಳು ರೈತ ಪರವಾಗಿವೆ ಎಂದು ಅವರು ಹೇಳಿದರು.
ರೈತಪರ ಕಾಯ್ದೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಬರುವ ಜನವರಿಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿಯೂ ಅವರು ಹೇಳಿದರು.
ರೈತ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ರಾಜ್ಯದ ೧೬೨ ಎಪಿಎಂಸಿಗಳಲ್ಲೂ ರೈತ ಸಮಾವೇಶ ನಡೆಸಿ ರೈತರಿಗೆ ಕಾಯ್ದೆಯ ಉಪಯೋಗವನ್ನು ಮನವರಿಕೆ ಮಾಡಿಕೊಡುವುದಾಗಿಯೂ ಅವರು ಹೇಳಿದರು.
ರಾಜ್ಯದ ಎಪಿಎಂಸಿಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಒದಗಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ೫ ಕೋಟಿ ರೂ.ಗಳನ್ನು ಒದಗಿಸಿದ್ದಾರೆ. ಎಪಿಎಂಸಿಗಳನ್ನು ಮುಚ್ಚುವಂತಿದ್ದರೆ ಹಣ ನೀಡುತ್ತಿದ್ದರೆ ಎಂದು ಅವರು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಎಪಿಎಂಸಿಗಳನ್ನು ಮುಚ್ಚುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ಕಾಯ್ದೆಗಳು ರೈತ ಪರವಾಗಿದ್ದರೂ ಕೆಲವರು ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ರೈತ ಪರವಾದ ಕಾಯ್ದೆಗಳನ್ನು ಜಾರಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅಭಿನಂದಿಸಿದ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ರೈತ ಮಹಿಳೆಯೊಬ್ಬರು ಹಾಲನ್ನು ಚರಂಡಿಗೆ ಸುರಿಯುತ್ತಿರುವ ದೃಶ್ಯ ನೋಡಿ ಮುಖ್ಯಮಂತ್ರಿಗಳು ಹಾಲು ಖರೀದಿಗೆ ಆದೇಶ ನೀಡಿ, ಆ ಹಾಲನ್ನು ಜನರಿಗೆ ಉಚಿತವಾಗಿ ಹಂಚಿದರು. ಹಾಗೆಯೇ ಲಾಕ್‌ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿದ್ದ ಕಟ್ಟಡ ಕಾರ್ಮಿಕರ ಖಾತೆಗೆ ೫ ಸಾವಿರ ರೂ. ಹಣ ವರ್ಗಾವಣೆ ಮಾಡಿದರು. ಇವೆಲ್ಲಾ ಜನಪರ ಕಾರ್ಯಕ್ರಮಗಳಲ್ಲವೇ ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ. ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪರ ನಿಲುವು, ರೈತ ಪರ ಕಾಳಜಿ ಪ್ರಶ್ನಾತೀತ. ಅವರ ಸೂಚನೆಯಂತೆ ಸಹಕಾರ ಇಲಾಖೆಯಲ್ಲೂ ರೈತಪರ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ ಎಂದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಗೋಪಾಲಯ್ಯ, ಬಿ.ಸಿ. ಪಾಟೀಲ್, ಶಾಸಕರಾದ ಮುನಿರತ್ನ, ಎನ್. ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.