ಎಪಿಎಂಸಿ ಮಾರುಕಟ್ಟೆ ಸಮಯ ವಿಸ್ತರಣೆಗೆ ಮನವಿ

ದಾವಣಗೆರೆ,ಏ.30- ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಿನನಿತ್ಯ ವಹಿವಾಟಿಗೆ ಗ್ರಾಮೀಣ ಭಾಗದಿಂದ ರೈತರು ಬರಬೇಕಾಗಿದೆ. ಈಗ ನಿಗಧಿ ಮಾಡಿರುವ ಸಮಯ ಬೆಳಿಗ್ಗೆ 10ರವರೆಗೆ ಸಾಕಾಗುವುದಿಲ್ಲ. ಆದ್ದರಿಂದ ಸಾಯಂಕಾಲ 4 ಗಂಟೆಯವರೆಗೂ ವಹಿವಾಟಿಗೆ ಅವಕಾಶ ಮಾಡಿದರೆ ಮಾತ್ರ ರೈತರಿಗೆ, ಹಮಾಲರಿಗೆ, ದಲ್ಲಾಳಿ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಎಂ. ಮಂಜುನಾಥ್ ತಿಳಿಸಿದ್ದಾರೆ. ಶೇಂಗಾ, ರಾಗಿ, ಭತ್ತ ಇನ್ನಿತರ ಉತ್ಪನ್ನಗಳನ್ನು ಒಣಗಿಸಿ, ಹದ ಮಾಡಿ ತರಬೇಕಾಗಿರುತ್ತದೆ. ಬೆಳಗಿನ ಸಮಯದಲ್ಲಿ ಇದು ಸಾಧ್ಯವಾಗುವುದಿಲ್ಲ. ಮಾರುಕಟ್ಟೆಯಲ್ಲಿ ದಿನಗೂಲಿಗಳಾಗಿ ಹಮಾಲರು ಸಾಕಷ್ಟು ಜೀವನೋಪಾಯ ಕಂಡುಕೊಂಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ವಹಿವಾಟಿಲ್ಲದ ಕಾರಣ, ಜೀವನ ನಿರ್ವಹಣೆಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯ ಅವಧಿ ವಿಸ್ತರಣೆ ಮಾಡುವುದರಿಂದ ಅವರಿಗೆ ಅನುಕೂಲವಾಗುವುದು. ಕೂಡಲೇ ಕೃಷಿ ಸಚಿವರು ವಹಿವಾಟಿನ ಸಮಯ ವಿಸ್ತರಣೆ ಮಾಡಬೇಕು. ರಾಜ್ಯ ಸರ್ಕಾರ 15 ದಿನಗಳ ಕಾಲ ಟಫ್ ರೂಲ್ಸ್ ಜಾರಿ ಮಾಡಿರುವುದರಿಂದ ರೈತರು ಬೆಳೆದು ಉತ್ಪನ್ನಗಳನ್ನು ಮನೆಯಲ್ಲಿ ಶೇಖರಣೆ ಮಾಡಲು ಸಾಧ್ಯವಿಲ್ಲ. ರೈತರು ಬೆಳೆದ ಉತ್ಪನ್ನಗಳು ದಾವಣಗೆರೆ ಜಿಲ್ಲಾ ಹಾಗೂ ಅವಿಭಾಜ್ಯ ಜಿಲ್ಲೆಗಳಿಂದ ಮತ್ತು ಗ್ರಾಮೀಣ ಭಾಗಗಳಿಂದ ಬಂದು ಬೆಳಗಿನ ಜಾವದಿಂದಲೇ ವಹಿವಾಟು ಮಾಡಲು ಆಗುವುದಿಲ್ಲ. ಇದರಿಂದ ರೈತರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಜಿಲ್ಲಾಡಳಿತ ರೈತರ ಬೆಳೆಗಳನ್ನು ಅಗತ್ಯವಸ್ತುಗಳ ಪೂರೈಕೆ ಎಂದು ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ. ಇವೆಲ್ಲಾ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ  ಸರ್ಕಾರ ಈ ಕೂಡಲೇ ರೈತರ ನೆರವಿಗೆ ಬರಬೇಕು ಹಾಗೂ ವಹಿವಾಟಿನ ಸಮಯ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದರು.