ಎಪಿಎಂಸಿ ಪ್ರಾಂಗಣದಲ್ಲಿ ಅಪ್ಪು ಜನ್ಮ ದಿನಾಚರಣೆ

ಕೋಲಾರ, ಮಾ,೧೮- ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಸ್ವಾರ್ಥತೆಯ ಮನೋಭಾವನೆ ಬಿಟ್ಟು ನಿಸ್ವಾರ್ಥ ಸೇವೆಯಲ್ಲಿ ತೊಡಗಿದಾಗ ಸಮಾಜಕ್ಕೆ ತಾವುಗಳು ಅಪಾರವಾದ ಕೊಡುಗೆ ನೀಡಿದಂತಾಗುತ್ತದೆ. ದಾನ, ಧರ್ಮ, ಸಹಾಯ ಸಹಕಾರ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ನೆಮ್ಮದಿಯ ಜೀವನ ಕಂಡುಕೊಂಡಂತಾಗುತ್ತದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಹೊರವಲಯದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಪುನೀತ್ ರಾಜ್‌ಕುಮಾರ್ ಜನ್ಮ ದಿನಾಚರಣೆ ಅಂಗವಾಗಿ ಎಪಿಎಂಸಿ ಮಾಲೀಕರ, ದಲ್ಲಾಳಿಗಳ, ವ್ಯಾಪಾರಸ್ಥರು ಹಾಗೂ ಕೂಲಿ ಕಾರ್ಮಿಕರಿಂದ ರಕ್ತದಾನ, ನೇತ್ರದಾನ, ಅನ್ನದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಮನುಷ್ಯ ತನ್ನ ಕುಟುಂಬ ನಿರ್ವಹಣೆಯ ಸಂಪಾದನೆಯಲ್ಲಿ ಒಂದಿಷ್ಟು ಬಡವರಿಗೆ ಸಹಾಯ ಮಾಡಬೇಕು, ಪುನೀತ್ ರಾಜ್‌ಕುಮಾರ್ ಅಂತಹ ಉದಾರ ಮನಸ್ಸಿನ ದಾನಿಗಳು ಇಂದು ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದ್ದಾರೆ. ಅಂತವರಿಂದ ಮತ್ತೊಬ್ಬರ ಜೀವನ ನೆಮ್ಮದಿಯ ಜೊತೆಗೆ ಸುಂದರ ಬದುಕು ಕಾಣಲು ಸಾಧ್ಯ ಎಂದರು.
ಹಿರಿಯ ವಕೀಲ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ವಿ ಶಂಕರಪ್ಪ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಪ್ರತಿಭಾನ್ವಿತ ನಟ, ಎಲ್ಲರನ್ನೂ ಗೌರವಿಸುವ ಹಾಗು ಕಿರಿಯರಿಗೂ ಮನ್ನಣೆ ಕೊಡುವ ವಿನಯಶೀಲತೆ ಕರ್ನಾಟಕ ರತ್ನ ಶ್ರೀ ಪುನೀತ್ ರಾಜಕುಮಾರ್ ಅವರ ಸೇವೆ ನಟನೆ ಶತ ಶತಮಾನಗಳು ಉಳಿಯುತ್ತವೆ ಯುವಕರಿಗೆ ಸ್ಫೂರ್ತಿಯಾಗಿರುವ, ಸದಾ ಹಸನ್ಮುಖಿಯಾದ ಪುನೀತ್ ರಾಜ್‌ಕುಮಾರ್ ಜನ್ಮದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇವರ ಸಮಾಜ ಸೇವೆಯು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಬದುಕಿದ್ದಗಲೂ ಮಾತಾಡುತ್ತಾರೆ, ಜೀವ ಹೋದ ಮೇಲೆಯೂ ಮಾತಾಡುತ್ತಾರೆ ಎಂದರೆ ಅವರ ಸಮಾಜಮುಖಿ ಕಾರ್ಯಗಳೇ ಸಾಕ್ಷಿ ಸಮಾಜದಲ್ಲಿ ನಾಲ್ಕು ಜನ ಮಾತಾಡುವ ಹಾಗೇ ಪ್ರತಿಯೊಬ್ಬರೂ ಬೆಳೆಯಬೇಕು ಎಂದರು.

ಎಪಿಎಂಸಿ ಟಮೋಟ ಮಾರುಕಟ್ಟೆ ಮಂಡಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಎ.ಪಿ.ನಾರಾಯಣಸ್ವಾಮಿ, ಜೆ.ಎನ್.ಜಿ ತರಕಾರಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಎಸ್.ಎ.ಅಂಬರೀಶ್, ಉಪಾಧ್ಯಕ್ಷ ಗೋಪಾಲಕೃಷ್ಣ, ಕರವೇ ಜಿಲ್ಲಾ ಅಧ್ಯಕ್ಷ ಚಂಬೆ ರಾಜೇಶ್, ಎಪಿಎಂಸಿ ಪುಟ್ಟರಾಜು, ಸಂತೋಷ, ಬೈಚೇಗೌಡ ಇದ್ದರು.